ಸಿಎಸ್‌ಐ ಲೊಂಬಾರ್ಡ್ ಮೆಮೋರಿಯಲ್ (ಮಿಷನ್) ಆಸ್ಪತ್ರೆಯಲ್ಲಿ ಹೀಟ್ ಪಂಪ್, ವಿಸ್ತರಿತ ಸೌರ ವಿದ್ಯುತ್ ಹಾಗೂ ಸಮಗ್ರ ಅಗ್ನಿ ಸುರಕ್ಷತಾ ವ್ಯವಸ್ಥೆ ಅನಾವರಣ



ಉಡುಪಿ: ಚಿಕಿತ್ಸೆ, ಸೇವೆ ಮತ್ತು ಕರುಣೆಯ 103 ವರ್ಷಗಳನ್ನು ಪೂರೈಸಿರುವ ಸಿಎಸ್‌ಐ ಲೊಂಬಾರ್ಡ್ ಮೆಮೋರಿಯಲ್ (ಮಿಷನ್) ಆಸ್ಪತ್ರೆ (ಎಲ್‌ಎಂಎಚ್), ಉಡುಪಿ, ಜೂನ್ 15ರಂದು ತನ್ನ ಆವರಣದಲ್ಲಿ ಮೂರು ಹೊಸ ಸೌಲಭ್ಯಗಳನ್ನು ಉದ್ಘಾಟಿಸುವ ಮೂಲಕ ಸುಸ್ಥಿರತೆ, ರೋಗಿ ಆರೈಕೆ ಮತ್ತು ಸುರಕ್ಷತೆಯತ್ತ ತನ್ನ ಬದ್ಧತೆಯನ್ನು ಮತ್ತಷ್ಟು ಬಲಪಡಿಸಿದೆ.

ಹೊಸದಾಗಿ ಅಳವಡಿಸಲಾದ ಹೀಟ್ ಪಂಪ್ ವ್ಯವಸ್ಥೆ, ವಿಸ್ತರಿತ 40 ಕಿಲೋವ್ಯಾಟ್ ಸೌರ ವಿದ್ಯುತ್ ವ್ಯವಸ್ಥೆ ಹಾಗೂ ಸಮಗ್ರ ಅಗ್ನಿ ಸುರಕ್ಷತಾ ವ್ಯವಸ್ಥೆಯನ್ನು ಸಿಎಸ್‌ಐ ಕರ್ನಾಟಕ ದಕ್ಷಿಣ ಧರ್ಮಪ್ರಾಂತ್ಯದ (CSI-KSD) ಬಿಷಪ್ ‌ಹೇಮಚಂದ್ರ ಕುಮಾರ್ ಅವರು ಸ್ವಿಚ್ ಆನ್ ಮಾಡುವ ಮೂಲಕ ಉದ್ಘಾಟಿಸಿದರು.



ಬಿಷಪ್ ಹೇಮಚಂದ್ರ ಕುಮಾರ್ ಅವರು ಹೊಸ ಸೌಲಭ್ಯಗಳಿಗೆ ಆಶೀರ್ವಾದ ನೀಡಿ ಮಾತನಾಡಿ, ಆಸ್ಪತ್ರೆಯ ಪರಿಸರ ಸ್ನೇಹಿ ಉಪಕ್ರಮಗಳು ಹಾಗೂ INSPIRE ಯೋಜನೆಯಡಿ ಕೈಗೊಂಡಿರುವ ನಾಯಕತ್ವವನ್ನು ಶ್ಲಾಘಿಸಿದರು. “ಡಾ. ಸುಶೀಲ್ ಜತ್ತಣ್ಣ ಅವರು ರೂಪಿಸುವ ಪ್ರತಿಯೊಂದು ಯೋಜನೆಯೂ ವಿಶಿಷ್ಟವಾಗಿದ್ದು, ಪರಿಸರ ಸ್ನೇಹಿಯಾಗಿದೆ. INSPIRE ಯೋಜನೆ ಕೇವಲ ಹೆಸರಲ್ಲ, ಇತರರಿಗೆ ಸ್ಫೂರ್ತಿ ನೀಡುವ ಕಾರ್ಯಯೋಜನೆಯಾಗಿದೆ. ಈ ಆಸ್ಪತ್ರೆ ನೀಡುತ್ತಿರುವ ಸೇವೆ ಉಡುಪಿ ಹಾಗೂ ಸುತ್ತಮುತ್ತಲಿನ ಜನರಿಗೆ ಅಪಾರ ಪ್ರಯೋಜನವಾಗುತ್ತಿದೆ,” ಎಂದರು.



ಕಾರ್ಯಕ್ರಮದಲ್ಲಿ ಮಾತನಾಡಿದ ಎಲ್‌ಎಂಎಚ್ ನಿರ್ದೇಶಕ ಡಾ. ಸುಶೀಲ್ ಜತ್ತಣ್ಣ ಅವರು, ಆಸ್ಪತ್ರೆ 103 ವರ್ಷಗಳ ಯಶಸ್ವಿ ಸೇವೆಯ ಬಳಿಕ ಇದೀಗ 104ನೇ ವರ್ಷದ ಸೇವೆಗೆ ಕಾಲಿಡುತ್ತಿದೆ.

“ನಮ್ಮ ಆಸ್ಪತ್ರೆಯ ಕಟ್ಟಡ ಹಳೆಯದಾಗಿರುವುದರಿಂದ ಅಗ್ನಿ ಸುರಕ್ಷತೆ ಅತ್ಯಂತ ಮಹತ್ವದ ವಿಷಯವಾಗಿದೆ. ಕಳೆದ ಎರಡು ವರ್ಷಗಳಿಂದ ಈ ಅಗ್ನಿ ಸುರಕ್ಷತಾ ಯೋಜನೆಯನ್ನು ರೂಪಿಸುತ್ತಿದ್ದು, ಇಂದು ಅದು ಸಾಕಾರಗೊಂಡಿದೆ. ಹೊಸ ಸೌರ ವಿದ್ಯುತ್ ಫಲಕಗಳಿಂದ ಪ್ರತಿ ತಿಂಗಳು ಸುಮಾರು ₹1.2 ಲಕ್ಷ ವಿದ್ಯುತ್ ವೆಚ್ಚ ಉಳಿತಾಯವಾಗಲಿದೆ. ಇದುವರೆಗೆ ನಮ್ಮ ವಿದ್ಯುತ್ ಅಗತ್ಯದ 43 ಶೇಕಡಾ ಭಾಗವನ್ನು ಸೌರಶಕ್ತಿಯಿಂದ ಪೂರೈಸಲಾಗುತ್ತಿತ್ತು. ಇದೀಗ ಅದು 58 ಶೇಕಡಕ್ಕೆ ಏರಿಕೆಯಾಗಿದೆ. ಈ ಉಪಕ್ರಮವು ಕಾರ್ಬನ್ ಉತ್ಸರ್ಜನೆಯನ್ನು ಕಡಿಮೆ ಮಾಡಲು ನೆರವಾಗಿದ್ದು, ಸಮಾಜಕ್ಕೆ ಮಾದರಿಯಾಗಬೇಕು. ಹೀಟ್ ಪಂಪ್ ವ್ಯವಸ್ಥೆಯು ಶಕ್ತಿ ಉಳಿತಾಯದ ಜೊತೆಗೆ ಹೆಚ್ಚಿನ ವೆಚ್ಚ ಉಳಿತಾಯ ಮತ್ತು ಕಡಿಮೆ ಕಾರ್ಬನ್ ಉತ್ಸರ್ಜನೆಯನ್ನು ಒದಗಿಸುತ್ತದೆ,” ಎಂದು ಹೇಳಿದರು.

ಹವಾಮಾನ ಬದಲಾವಣೆ ಸಂಬಂಧ ಕೈಗೊಂಡಿರುವ ಉಪಕ್ರಮಗಳಿಗಾಗಿ ಎಲ್‌ಎಂಎಚ್ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದೆ ಎಂಬುದನ್ನೂ ತಿಳಿಸಿದರು.

ಆಸ್ಪತ್ರೆಯ ಎನರ್ಜಿ ಎಫಿಷಿಯನ್ಸಿ ತಂಡ ಹಾಗೂ INSPIRE ಯೋಜನೆಯಡಿ ಹೆಚ್ಚುವರಿ 40 ಕಿಲೋವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ವ್ಯವಸ್ಥೆಯನ್ನು ಮೈಕ್ರೋಬಯಾಲಜಿ ವಿಭಾಗ ಮತ್ತು ಎಲ್‌ಎಂಎಚ್ ಸಭಾಂಗಣದ ಮೇಲ್ಛಾವಣಿಗಳಲ್ಲಿ ಅಳವಡಿಸಲಾಗಿದ್ದು, ಸುಸ್ಥಿರ ಹಾಗೂ ಪರಿಸರ ಸ್ನೇಹಿ ಇಂಧನ ಬಳಕೆಗೆ ಉತ್ತೇಜನ ನೀಡಲಾಗಿದೆ.

ಹೊಸದಾಗಿ ಆರಂಭಿಸಲಾದ ಅಗ್ನಿ ಸುರಕ್ಷತಾ ವ್ಯವಸ್ಥೆಯು ರೋಗಿಗಳು, ಸಿಬ್ಬಂದಿ ಹಾಗೂ ಭೇಟಿ ನೀಡುವವರ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ. ಇದರಲ್ಲಿ ಸಣ್ಣ ಪ್ರಮಾಣದ ಬೆಂಕಿ ಅವಘಡಗಳಿಗೆ ತಕ್ಷಣ ಸ್ಪಂದಿಸುವ ಫೈರ್ ರೀಲ್ ವ್ಯವಸ್ಥೆ, ದೊಡ್ಡ ಪ್ರಮಾಣದ ಅಗ್ನಿ ಅವಘಡಗಳನ್ನು ಎದುರಿಸಲು ಫೈರ್ ಹೈಡ್ರೆಂಟ್ ವ್ಯವಸ್ಥೆ ಹಾಗೂ ತುರ್ತು ಸಂದರ್ಭಗಳಲ್ಲಿ ಬೆಂಕಿಯನ್ನು ನಿಯಂತ್ರಿಸಲು ಅಥವಾ ನಂದಿಸಲು ಫೈರ್ ಸ್ಪ್ರಿಂಕ್ಲರ್ ವ್ಯವಸ್ಥೆಗಳನ್ನು ಒಳಗೊಂಡಿದೆ.

ಹೊಸದಾಗಿ ಅಳವಡಿಸಲಾದ ಹೀಟ್ ಪಂಪ್ ವ್ಯವಸ್ಥೆಯು ರೋಗಿಗಳ ಆರೈಕೆಗೆ 24 ಗಂಟೆಗಳ ನಿರಂತರ ಬಿಸಿ ನೀರಿನ ಪೂರೈಕೆಯನ್ನು ಒದಗಿಸಲಿದೆ. ಈ ವ್ಯವಸ್ಥೆಯು ಶಕ್ತಿ ಉಳಿತಾಯದ ಜೊತೆಗೆ 60 ರಿಂದ 70 ಶೇಕಡಾ ವೆಚ್ಚ ಉಳಿತಾಯವನ್ನು ನೀಡಲಿದ್ದು, ಅತ್ಯಂತ ಕಡಿಮೆ ಕಾರ್ಬನ್ ಉತ್ಸರ್ಜನೆಯನ್ನು ಹೊಂದಿದೆ.

ಎನರ್ಜಿ ಎಫಿಷಿಯನ್ಸಿ ತಂಡದ ನಾಯಕ ನವೀನ್ ಅವರು ಹೊಸದಾಗಿ ಅಳವಡಿಸಲಾದ ಸೌಲಭ್ಯಗಳು ಹಾಗೂ ಅವುಗಳ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಿಎಸ್‌ಐ-ಕೆಎಸ್‌ಡಿ ಖಜಾಂಚಿ ಇವಾನ್ ಡಿ ಸೋನ್ಸ್, ಸಹ ಕಾರ್ಯದರ್ಶಿ ಸ್ಟೀಫನ್ ಕಾರ್ಕಡ, ಉಡುಪಿ ಪ್ರದೇಶ ಅಧ್ಯಕ್ಷ ಕಿಶೋರ್ ಕುಮಾರ್, ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಶಬೀಹ್ ಅಹ್ಮದ್ ಖಾಜಿ, ಆಸ್ಪತ್ರೆಯ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.