ಮಂಗಳೂರು: ಸರ್ಕಾರಿ ಆಸ್ಪತ್ರೆಗಳನ್ನು ಖಾಸಗೀಕರಣಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿಮೆನ್ ಇಂಡಿಯಾ ಮೂವ್ಮೆಂಟ್ ಮಂಗಳೂರು ನಗರ ಜಿಲ್ಲೆ ಅಧ್ಯಕ್ಷೆ ಆಯಿಷಾ ಯಾಸ್ಮಿನ್ ತೀವ್ರವಾಗಿ ಖಂಡಿಸಿದ್ದಾರೆ.
ಮಂಗಳೂರು ನಗರ ಜಿಲ್ಲೆಯಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ಲೇಡಿ ಗೋಶೆನ್ ಆಸ್ಪತ್ರೆ, ಮಕ್ಕಳ ವಿಶೇಷ ಚಿಕಿತ್ಸಾ ಕೇಂದ್ರ, ಮುಲ್ಕಿ ಸರ್ಕಾರಿ ಆಸ್ಪತ್ರೆ, ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಅನೇಕ ಸರ್ಕಾರಿ ಆಸ್ಪತ್ರೆಗಳು ಸಾವಿರಾರು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಜೀವನಾಡಿಯಾಗಿವೆ. ವಿಶೇಷವಾಗಿ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಹಾಗೂ ದಿನಗೂಲಿ ಕಾರ್ಮಿಕರು ಈ ಸರ್ಕಾರಿ ಆರೋಗ್ಯ ಸೇವೆಗಳ ಮೇಲೆ ಅವಲಂಬಿತರಾಗಿದ್ದಾರೆ.
ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣದಿಂದ ಚಿಕಿತ್ಸೆ ವೆಚ್ಚ ಹೆಚ್ಚಾಗಿ ಸಾಮಾನ್ಯ ಜನರಿಗೆ ಆರೋಗ್ಯ ಸೇವೆ ಪಡೆಯುವುದು ಕಷ್ಟಕರವಾಗಲಿದೆ. ಮಹಿಳೆಯರು ಮತ್ತು ಮಕ್ಕಳು ಇದರಿಂದ ತೀವ್ರವಾದ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಗರ್ಭಿಣಿಯರು, ನವಜಾತ ಶಿಶುಗಳು ಹಾಗೂ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರಿಗೆ ಅಗತ್ಯ ಚಿಕಿತ್ಸೆಯನ್ನು ಪಡೆಯುವುದು ದುಬಾರಿ ಹಾಗೂ ಕಠಿಣವಾಗುವ ಸಾಧ್ಯತೆ ಇದೆ.
ಆರೋಗ್ಯ ಸೇವೆ ಜನರ ಮೂಲಭೂತ ಹಕ್ಕಾಗಿದ್ದು, ಅದನ್ನು ವ್ಯಾಪಾರ ವಸ್ತುವಾಗಿ ಪರಿವರ್ತಿಸುವ ಪ್ರಯತ್ನವನ್ನು ಸರ್ಕಾರ ಕೈಬಿಡಬೇಕು. ಸರ್ಕಾರಿ ಆಸ್ಪತ್ರೆಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ವೈದ್ಯರು, ಸಿಬ್ಬಂದಿ ಮತ್ತು ಮೂಲಸೌಕರ್ಯಗಳನ್ನು ಬಲಪಡಿಸುವತ್ತ ಸರ್ಕಾರ ಗಮನ ಹರಿಸಬೇಕು.
ರಾಜ್ಯ ಸರ್ಕಾರವು ತಕ್ಷಣವೇ ಖಾಸಗೀಕರಣ ನೀತಿಯನ್ನು ಹಿಂತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಸಂಘಟಿತ ಹೋರಾಟ ನಡೆಸುವೆವು ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಮಂಗಳೂರು ನಗರ ಜಿಲ್ಲೆ ಅಧ್ಯಕ್ಷೆ ಆಯಿಷಾ ಯಾಸ್ಮಿನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
