ಉಡುಪಿ: ಶಾಲಾ ಕಾಲೇಜುಗಳಲ್ಲಿ ಸೀಮಿತ ಮತೀಯ ತೊಡುಗೆಗಳಿಗೆ ಅವಕಾಶ ನೀಡುವ ಕರ್ನಾಟಕ ಸರಕಾರದ ನಿರ್ಧಾರಕ್ಕೆ ನಮ್ಮ ವೇದಿಕೆಯು ಬೆಂಬಲ ಸೂಚಿಸುತ್ತದೆ. ತಡವಾಗಿಯಾದರೂ ಸರಕಾರವು ಸಮತೋಲದ ನಿರ್ಧಾರ ತೆಗೆದುಕೊಂಡಿದೆ.
2022ರಲ್ಲಿ ಉಡುಪಿಯ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಅನಾವಶ್ಯಕವಾಗಿ 'ಹಿಜಾಬ್ ವಿವಾದ' ಹುಟ್ಟು ಹಾಕಲಾಯಿತು. ಅದು ಅಲ್ಪ ಸಂಖ್ಯಾತ ವಿದ್ಯಾರ್ಥಿನಿಯರನ್ನು ಗುರಿಯಾಗಿ ಇಟ್ಟುಕೊಂಡು ಅಲ್ಪ ಸಂಖ್ಯಾತರ ಸಹಜ ಬದುಕಿನ ಕ್ರಮವನ್ನು ಅಪರಾಧೀಕರಣಗೊಳಿಸುವ ರಾಜಕೀಯ ಯೋಜನೆಯ ಭಾಗವಾಗಿತ್ತು. ಯೋಜಿತವಾಗಿ ಕೋಮುವಾದಿ ಸಂಘಟನೆಗಳು ಇದನ್ನು ರಾಜ್ಯವ್ಯಾಪಿ ದಾಂಧಲೆಯಾಗಿ ಬೆಳೆಸಿದವು. ಅದಕ್ಕೆ ಅನುಗುಣವಾಗಿ ಅಂದಿನ ಭಾ.ಜ.ಪ. ಆಡಳಿತದ ಸರಕಾರವು ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವ ಕ್ರಮದ ಮೇಲೆ ನಿಷೇಧ ಹೇರಿತು. ಸಾರ್ವಜನಿಕ ಸಮಾನತೆಯ ಸೋಗಿನಲ್ಲಿ ಜಾರಿಗೆ ತಂದ ಈ ನಿಯಮವು, ಬರೀ ಅಲ್ಪಸಂಖ್ಯಾತರ ಮತೀಯ ಸಾಂಕೇತಿಕ ಉಡುಗೆ ತೊಡುಗೆಗಳಿಗೆ ಮಾತ್ರ ತಡೆಯೊಡ್ಡಿದ್ದು, ಅದರ ದುರುಳ ಉದ್ದೇಶವನ್ನು ಜಾಹೀರುಗೊಳಿಸಿತ್ತು. ನಂತರದ ನಾಲ್ಕು ವರ್ಷಗಳಲ್ಲಿ ಪರೀಕ್ಷೆಯ ವೇಳೆ ಕರ್ನಾಟಕದ ಕೆಲವು ವಿದ್ಯಾಲಯಗಳಲ್ಲಿ , ವೈದಿಕಶಾಹಿ ಜನಿವಾರದ ನಿರ್ಬಂಧ ಹೇರಿದಾಗ, ಇದೇ ಕೋಮುವಾದಿ ಸಂಘಟನೆಗಳು 'ಧಾರ್ಮಿಕ ದಾಳಿ'ಯ ಆರೋಪ ಮಾಡಿ ಗಲಾಟೆ ಎಬ್ಬಿಸಿದ್ದವು! 2026ರ ಪರೀಕ್ಷೆಯ ವೇಳೆ ಮತ್ತೇ ಅದೇ ವಿಧದ ವಿವಾದ ನಡೆದ ನಂತರ, ಪ್ರಸ್ತುತ ಸರಕಾರವು 2022ರ ಆಜ್ಞೆಯನ್ನು ಹಿಂಪಡೆದಿದೆ.
ಸಂವಿಧಾನಬದ್ಧ ಮತೀಯ ಸ್ವಾತಂತ್ರ್ಯದ ಹಕ್ಕಿಗೆ ವ್ಯತಿರಿಕ್ತವಾದ ಇಂತಹ ನಡೆಗಳು ಸಹಬಾಳ್ವೆಯ ಚೇತನಕ್ಕೆ ಮಾರಕವಾದವು ಎಂದು ಅರಿತು, ಅದನ್ನು ತಡೆಯುವುದಕ್ಕೆ ಪ್ರಸ್ತುತ ಸರಕಾರವು ಇಷ್ಟು ವರ್ಷ ಕಾಯುವ ಅವಶ್ಯಕತೆ ಇರಲಿಲ್ಲ. ತಡವಾಗಿಯಾದರೂ, ಸರಕಾರವು ಸೂಕ್ತ ಕ್ರಮ ಕೈಗೊಂಡಿರುವಾಗ, ವಿವಾದದ ಜನಕರಾದ ಉಡುಪಿಯ ಶಾಸಕರು ಮತ್ತೇ ತಮ್ಮ ಉಗ್ರ ಮತೀಯ ದ್ವೇಷದ ಹೇಳಿಕೆಗಳನ್ನು ನೀಡಿರುವುದನ್ನು ನಮ್ಮ ವೇದಿಕೆಯು ಖಂಡಿಸುತ್ತದೆ.
ಕರ್ನಾಟಕದ ಪ್ರಜೆಗಳು ಬಹುಸಂಖ್ಯಾತ ಮತೀಯವಾದಿ ಆಕ್ರಮಣ ರಾಜಕೀಯ ಯೋಜನೆಗಳ ಅಪಾಯ ಅರಿತು, ಶಾಂತಿ- ಸೌಹಾರ್ದಯುತ ಬದುಕಿಗೆ ಪೂರಕವಾದ ನಡೆಗಳನ್ನು ಬೆಂಬಲಿಸ ಬೇಕು ಎಂದು ನಮ್ಮ ವೇದಿಕೆಯು ಅರಿಕೆ ಮಾಡುತ್ತದೆ ಎಂದು ಸಹಬಾಳ್ವೆಯ ಪ್ರಧಾನ ಸಂಚಾಲಕ ಕೆ.ಫಣಿರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
