'ಗೃಹಲಕ್ಷ್ಮೀ' 22 ಕೋಟಿ ಹಣ ಮೃತ ಫಲಾನುಭವಿಗಳ ಖಾತೆಗೆ ವರ್ಗಾವಣೆ!

 


ಮಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಗೃಹಲಕ್ಷ್ಮಿ' ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಎಡವಟ್ಟು ಸಂಭವಿಸಿರುವುದು ಬೆಳಕಿಗೆ ಬಂದಿದೆ. ಜಿಲ್ಲೆಯಲ್ಲಿ ಮೃತಪಟ್ಟಿರುವ ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ ಸುಮಾರು 22 ಕೋಟಿ ರೂಪಾಯಿ ವರ್ಗಾವಣೆಯಾಗಿದೆ ಎಂಬ ಮಾಹಿತಿ ವರದಿಯಾಗಿದೆ.

ಯೋಜನೆಯ ನಿಯಮದಂತೆ ಫಲಾನುಭವಿಗಳು ಮೃತಪಟ್ಟಲ್ಲಿ ಆ ಬಗ್ಗೆ ಮಾಹಿತಿ ಅಪ್‌ಡೇಟ್ ಆಗಿ ಹಣ ಪಾವತಿ ಸ್ಥಗಿತಗೊಳ್ಳಬೇಕಿತ್ತು. ಆದರೆ, ಜಿಲ್ಲೆಯಲ್ಲಿ ಮರಣ ಹೊಂದಿದ ಮಹಿಳೆಯರ ಹೆಸರಿನಲ್ಲಿರುವ ನಿಷ್ಕ್ರಿಯ ಖಾತೆಗಳಿಗೆ ನಿರಂತರವಾಗಿ ಹಣ ಜಮೆಯಾಗುತ್ತಿರುವುದು ರಾಜ್ಯ ಕಚೇರಿಯ ಗಮನಕ್ಕೆ ಬಂದಿದೆ. ಈ ಕುರಿತು ರಾಜ್ಯ ಮಟ್ಟದಿಂದ ಬಂದ ಮಾಹಿತಿಯು ಆಡಳಿತ ವಲಯದಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ.ಮೃತಪಟ್ಟಿದ್ದರೂ ಹಣ ಪಡೆಯುತ್ತಿರುವ ಫಲಾನುಭವಿಗಳ ಸಂಪೂರ್ಣ ಪಟ್ಟಿಯನ್ನು ಕೂಡಲೇ ಸಿದ್ಧಪಡಿಸುವುದು, ನಿಷ್ಕ್ರಿಯ ಅಥವಾ ಮೃತ ಫಲಾನುಭವಿಗಳ ಖಾತೆಗೆ ಜಮೆಯಾಗಿರುವ ಮೊತ್ತವನ್ನು ಪತ್ತೆ ಹಚ್ಚಿ, ಅದನ್ನು ಹಿಂಪಡೆದು ಸರ್ಕಾರಕ್ಕೆ ಮರುಪಾವತಿಸುವುದು,  ಜಿಲ್ಲಾದ್ಯಂತ ಯೋಜನೆಯ ಅರ್ಹ ಫಲಾನುಭವಿಗಳ ಸ್ಥಿತಿಗತಿಯನ್ನು ಮರು-ಪರಿಶೀಲನೆಗೆ ಒಳಪಡಿಸುವ ಕಾರ್ಯ ಈಗ ನಡೆಯುತ್ತಿದೆ.

ಅರ್ಹರಿಗೆ ತಲುಪಬೇಕಾದ ಹಣವು ತಾಂತ್ರಿಕ ಕಾರಣಗಳಿಂದ ಅಥವಾ ಮಾಹಿತಿಯ ಕೊರತೆಯಿಂದ ಮೃತಪಟ್ಟವರ ಖಾತೆಗೆ ಹೋಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.