ಅಮೆರಿಕ-ಇರಾನ್ ಮಾತುಕತೆ ಪುನರಾರಂಭ ಸಾಧ್ಯತೆ: ಟ್ರಂಪ್‌



ವಾಷಿಂಗ್ಟನ್/ಇಸ್ಲಾಮಾಬಾದ್: ಕೆಲವು ದಿನಗಳಿಂದ ಸ್ಥಗಿತಗೊಂಡಿದ್ದ ಅಮೆರಿಕ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಮಾತುಕತೆಗಳು ಮುಂದಿನ ಎರಡು ದಿನಗಳಲ್ಲಿ ಮತ್ತೆ ಆರಂಭವಾಗುವ ಸಾಧ್ಯತೆಗಳಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು ನೀಡಿದ್ದಾರೆ. 'ನ್ಯೂಯಾರ್ಕ್ ಪೋಸ್ಟ್'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, 'ಮುಂದಿನ ಎರಡು ದಿನಗಳಲ್ಲಿ ಏನಾದರೂ ಸಂಭವಿಸಬಹುದು. ನಾವು ಪಾಕಿಸ್ತಾನಕ್ಕೆ ತೆರಳಲು ಹೆಚ್ಚಿನ ಒಲವು ಹೊಂದಿದ್ದೇವೆ' ಎಂದು ಹೇಳುವ ಮೂಲಕ ಈ ಬಾರಿಯೂ ಪಾಕಿಸ್ತಾನ ಮಾತುಕತೆಯ ಮಧ್ಯಸ್ಥಿಕೆಯನ್ನು ವಹಿಸಿಕೊಳ್ಳಲಿದೆ ಎಂದಿದ್ದಾರೆ.ಕಳೆದ ವಾರಾಂತ್ಯದಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ಇರಾನ್ ಸಂಸತ್ತಿನ ಸ್ಪೀಕ‌ರ್ ಮೊಹಮ್ಮದ್ ಬಾಗರ್ ಗಾಲಿಬಾಫ್ ನಡುವೆ ಮಹತ್ವದ ಸಭೆ ನಡೆದಿತ್ತು. ಆದರೆ, ಈ ಸಭೆಯಲ್ಲಿ ಯಾವುದೇ ನಿರ್ದಿಷ್ಟ ಒಪ್ಪಂದವಿಲ್ಲದೆ ಅಂತ್ಯಗೊಂಡಿತ್ತು.

ಇರಾನ್ ಮತ್ತು ಪಾಕಿಸ್ತಾನದ ನಡುವೆ ಈ ಬಗ್ಗೆ ಮಾತುಕತೆ ನಡೆದಿರುವುದನ್ನು ಇರಾನ್‌ ಸರ್ಕಾರಿ ಮಾಧ್ಯಮಗಳು ದೃಢಪಡಿಸಿವೆ. ಆದರೆ, ಅಮೆರಿಕದೊಂದಿಗೆ ಮುಂದಿನ ಹಂತದ ಮಾತುಕತೆ ನಡೆಸುವ ಬಗ್ಗೆ ಯಾವುದೇ ಅಧಿಕೃತ ಒಪ್ಪಂದವಾಗಿಲ್ಲ ಎಂದೂ ಸ್ಪಷ್ಟಪಡಿಸಿವೆ.