ಬೆಂಗಳೂರು: ಉಡುಪಿ ಜಿಲ್ಲೆಯ ರಾಜಕೀಯ ಸಾಮಾಜಿಕ ನೇತಾರೆ ಗೀತಾಂಜಲಿ ಸುವರ್ಣ ಅವರಿಗೆ ಇಂದು "ಕರಾವಳಿ ಜನಪದ ರತ್ನ ಪ್ರಶಸ್ತಿ" ಪ್ರದಾನ ಮಾಡಲಾಯಿತು.
ವೈಟ್ ಲೊಟಸ್ ಫೌಂಡೇಷನ್ ಟ್ರಸ್ಟ್' 'ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು' ದಕ್ಷಿಣ ಕನ್ನಡ ಜಿಲ್ಲಾ ಘಟಕದ ಬಂಟ್ವಾಳ ತಾಲೂಕು ಘಟಕ ಸಹಯೋಗದೊಂದಿಗೆ ನೇತಾಜಿ ಸುಭಾಷ್‌ಚಂದ್ರ ಬೋಸ್ ಮೈದಾನ ಬಸವೇಶ್ವರ ನಗರ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿತ್ತು.
ಕಾರ್ಯಕ್ರಮದಲ್ಲಿ ಪಮ್ಮಿ ಕೊಡಿಯಾಲ್ ಬೈಲ್ , ಪ್ರಮೀಳಾ ಮಾಣೂರು ,ಪದ್ಮಾ ರಾಜ್ ,ಅಲೋಕ್ ಕುಂದರ್ ,ಚಿದಂಬರ್ ಮತ್ತಿತರರು ಉಪಸ್ಥಿತರಿದ್ದರು.
ಸಂಘಟನೆ ಬಗ್ಗೆ :
ನಮ್ಮ ನಾಡಿನ ಜಾನಪದ ಪರಂಪರೆ ಶ್ರೇಷ್ಠವಾದುದು. ಜನಪದ ಭೌತಿಕ ವಸ್ತುಗಳು, ಜನಪದ ಹಾಡುಗಳು, ನೃತ್ಯಗಳು, ಗಾದೆಗಳು, ಒಗಟುಗಳು, ಕರಕುಶಲ ಕಲೆಗಳು ಇತ್ಯಾದಿ ಜಾನಪದ ಪ್ರಕಾರಗಳು ಜಾನಪದರ ಬದುಕು ಮತ್ತು ಸಂಸ್ಕೃತಿಯನ್ನು ಜೀವಂತವಾಗಿಸಬಲ್ಲ ಶ್ರೇಷ್ಠವಾದ ಸಂಪತ್ತಾಗಿದೆ. ಆದರೆ ಇಂದಿನ ಆಧುನಿಕ ಕಾಲಘಟ್ಟದಲ್ಲಿ ಜಾನಪದ ಸಂಸ್ಕೃತಿ ಕಣ್ಮರೆಯಾಗುತ್ತಿದ್ದು ಇದನ್ನು ಉಳಿಸಿ ಬೆಳೆಸುವ ಮಹತ್ತರವಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಜಾನಪದ ಪರಂಪರೆಯ ನೆಲೆಗಟ್ಟನ್ನು ಗಟ್ಟಿಗೊಳಿಸುತ್ತಾ ಅದನ್ನು ನಾಡಿಗೆ ಪಸರಿಸುವ ದೃಷ್ಠಿಯಲ್ಲಿ ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಕಾರ್ಯನಿರ್ವಹಿಸುತ್ತಿದೆ.
ನಮ್ಮ ಕರ್ನಾಟಕ ಕಲೆ, ಸಾಹಿತ್ಯ, ಸಂಸ್ಕೃತಿ, ಶೈಕ್ಷಣಿಕ, ಧಾರ್ಮಿಕ, ಕ್ರೀಡೆ, ತಾಂತ್ರಿಕತೆ ಇತ್ಯಾದಿ ಎಲ್ಲಾ ಕ್ಷೇತ್ರಗಳಲ್ಲೂ ವಿಶ್ವಕ್ಕೆ ಮಾದರಿಯಾಗಿ ಗುರುತಿಸಲ್ಪಟ್ಟ ರಾಜ್ಯ ಅದರಲ್ಲೂ ನಮ್ಮ ಪ್ರತೀ ಜಿಲ್ಲೆಗಳು ಅದರದ್ದೇ ಆದ ವಿಶೇಷತೆಗಳನ್ನು ಹೊಂದಿದೆ.
ಕರಾವಳಿ ಪ್ರದೇಶದ ವಿಶೇಷತೆಗಳು : ಇಲ್ಲಿನ ಪರಂಪರೆ ಬಹುವರ್ಣನೀಯ, ಈದೀಗ 'ವೈಟ್ ಲೊಟಸ್ ಫೌಂಡೇಷನ್ ಟ್ರಸ್ಟ್' 'ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು' ದಕ್ಷಿಣ ಕನ್ನಡ ಜಿಲ್ಲಾ ಘಟಕದ ಬಂಟ್ವಾಳ ತಾಲೂಕು ಘಟಕ ಸಹಯೋಗದೊಂದಿಗೆ ದಿನಾಂಕ 24-04-2026ರಿಂದ 26-04-2026ರ ವರೆಗೆ ನೇತಾಜಿ ಸುಭಾಷ್‌ಚಂದ್ರ ಬೋಸ್ ಮೈದಾನ ,ಬಸವೇಶ್ವರ ನಗರ ಬೆಂಗಳೂರಿನಲ್ಲಿ ಕರಾವಳಿ ಜಿಲ್ಲೆಗಳ, ಸಂಸ್ಕೃತಿ, ಜನಪದ ಕಲೆ, ಯಕ್ಷಗಾನ, ಭೂತಾರಾಧನೆ, ನಾಗಾರಾಧನೆ, ಹುಲಿ ಕುಣಿತ, ಆಹಾರ ಮೇಳ, ಆಚಾರ-ವಿಚಾರ, ತುಳು ಪಾಡ್ಡನ ಜನಪದ ನಲಿಕೆ, ತುಳು ಜನಪದ ಭಾಷೆ ಒಟ್ಟಾರೆಯಾಗಿ ಕರಾವಳಿ ಸೌಂದರ್ಯದ ಚಿತ್ರಣವನ್ನು ನಮ್ಮ ರಾಜಧಾನಿ ಬೆಂಗಳೂರಿನಲ್ಲಿ 'ಕರಾವಳಿ ಜಾನಪದ ವೈಭವ' ಎಂಬ ಶೀರ್ಷಿಕೆಯಡಿಯಲ್ಲಿ ಪ್ರದರ್ಶಿಸಲು ಕರಾವಳಿಯ ಸಾಂಸ್ಕೃತಿಕ, ಜನಪದೀಯ, ಮನರಂಜನೆಯ, ಕರಾವಳಿ ಖಾದ್ಯಗಳ, ಕರಾವಳಿ ಕ್ರೀಡೆ, ಹುಲಿ ವೇಷ, ಯಕ್ಷಗಾನ, ನಾಟಕಗಳ ಹಾಗೂ ಕರಾವಳಿ ವಸ್ತು ಪ್ರದರ್ಶನ ಮಳಿಗೆಗಳ ಕಲಾಮೇಳ ಮತ್ತು ಕಾರ್ಯಾಗಾರಗಳು ಆಯೋಜನೆಗೊಂಡಿವೆ.

