ಸಂಧಾನ ಫೇಲ್- ಅಮೆರಿಕಾ ನಿಯೋಗ ಪಾಕಿಸ್ಥಾನದಿಂದ ಬರಿಗೈಲಿ ವಾಪಸ್ !



ವಾಷಿಂಗ್ಟನ್, ಏಪ್ರಿಲ್ 12: ಅಮೆರಿಕ ಮತ್ತು ಇರಾನ್(Iran) ನಡುವಿನ ದೀರ್ಘಕಾಲದ ವೈಮನಸ್ಸು ಶಮನಗೊಳಿಸಲು ಪಾಕಿಸ್ತಾನದಲ್ಲಿ ನಡೆದ ಐತಿಹಾಸಿಕ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಸತತ 21 ಗಂಟೆಗಳ ಕಾಲ ಎರಡೂ ದೇಶಗಳ ಪ್ರತಿನಿಧಿಗಳು ಮುಖಾಮುಖಿಯಾಗಿ ಚರ್ಚಿಸಿದರೂ, ಅಂತಿಮವಾಗಿ ಯಾವುದೇ ಒಪ್ಪಂದಕ್ಕೆ ಸಹಿ ಹಾಕಲು ಸಾಧ್ಯವಾಗಿಲ್ಲ ಎಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಘೋಷಿಸಿದ್ದಾರೆ.ಇಸ್ಲಾಮಾಬಾದ್‌ನಲ್ಲಿ ನಡೆದ ಸುದೀರ್ಘ 21 ಗಂಟೆಗಳ ಹೈ-ವೋಲ್ಟೇಜ್ ರಾಜತಾಂತ್ರಿಕ ಸಂಘರ್ಷ ಅಂತಿಮವಾಗಿ ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ. ಇಡೀ ಜಗತ್ತು ಕುತೂಹಲದಿಂದ ಕಾಯುತ್ತಿದ್ದ ಅಮೆರಿಕ-ಇರಾನ್ ನೇರ ಮಾತುಕತೆ ವಿಫಲವಾಗಿದ್ದು, ಅಮೆರಿಕದ ನಿಯೋಗವು ಅತೃಪ್ತಿಯಿಂದಲೇ ಪಾಕಿಸ್ತಾನವನ್ನು ತೊರೆಯಲು ನಿರ್ಧರಿಸಿದೆ. ಇಸ್ಲಾಮಾಬಾದ್‌ನಲ್ಲಿ ನಡೆದ ಈ ಮಾತುಕತೆಗಳ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿ ವ್ಯಾನ್ಸ್, ತಮ್ಮ ನಿರಾಶೆ ಹೊರಹಾಕಿದರು.ನಾವು ಸತತ 21 ಗಂಟೆಗಳ ಕಾಲ ಮಾತುಕತೆಯಲ್ಲಿ ತೊಡಗಿದ್ದೆವು. ಆದರೆ ದುರದೃಷ್ಟವಶಾತ್ ನಾವು ಯಾವುದೇ ಒಪ್ಪಂದಕ್ಕೆ ಬರಲು ಸಾಧ್ಯವಾಗಿಲ್ಲ ಎಂಬುದು ಕೆಟ್ಟ ಸುದ್ದಿ. ನಾವು ಇರಾನ್‌ಗೆ ಅತ್ಯುತ್ತಮ ಆಫರ್‌ಗಳನ್ನು ನೀಡಿದ್ದೆವು, ಆದರೂ ಅವರು ಒಪ್ಪಂದಕ್ಕೆ ಸಿದ್ಧರಿಲ್ಲ. ಹೀಗಾಗಿ ನಮ್ಮ ನಿಯೋಗ ಈಗ ಪಾಕಿಸ್ತಾನದಿಂದ ಅಮೆರಿಕಕ್ಕೆ ಹಿಂದಿರುಗುತ್ತಿದೆ ಎಂದು ಅವರು ತಿಳಿಸಿದರು. ಮಾತುಕತೆಯ ಸಮಯದಲ್ಲಿ ವಾಷಿಂಗ್ಟನ್ ತನ್ನ ನಿರ್ಣಾಯಕ ಶರತ್ತುಗಳನ್ನು ಸ್ಪಷ್ಟವಾಗಿ ವಿವರಿಸಿದೆ ಎಂದು ವ್ಯಾನ್ಸ್ ಹೇಳಿದರು.