ಇಸ್ಲಾಮಾಬಾದ್:ಮಧ್ಯಪ್ರಾಚ್ಯದಲ್ಲಿ ದೀರ್ಘಕಾಲದಿಂದ ನಡೆಯುತ್ತಿರುವ ಸಂಘರ್ಷಕ್ಕೆ ಪೂರ್ಣವಿರಾಮ ಹಾಡುವ ನಿಟ್ಟಿನಲ್ಲಿ ಪಾಕಿಸ್ಥಾನದಲ್ಲಿ ಶನಿವಾರ ಅಮೆರಿಕ ಹಾಗೂ ಇರಾನ್ ಮಧ್ಯೆ ಮಹತ್ವದ ಶಾಂತಿ ಮಾತುಕತೆ ನಡೆಯಲಿದ್ದು, ಇಸ್ಲಾಮಾಬಾದ್‌ನಲ್ಲಿ ಭದ್ರತೆ ಸೇರಿದಂತೆ ಭರದ ಸಿದ್ಧತೆಗಳು ನಡೆದಿವೆ.
ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಖಲೀಬಾಫ್ ನೇತೃತ್ವದ ಮಾತುಕತೆ ನಿಯೋಗವು ಅಮೆರಿಕದೊಂದಿಗೆ ಶಾಂತಿ ಮಾತುಕತೆಗಾಗಿ ಶುಕ್ರವಾರ ರಾತ್ರಿ ಇಸ್ಲಾಮಾಬಾದ್‌ಗೆ ಆಗಮಿಸಿದೆ ಎಂದು ಇರಾನಿನ ಮಾಧ್ಯಮ ವರದಿ ಮಾಡಿದೆ.
ನಿಯೋಗದಲ್ಲಿ ಇರಾನ್ ವಿದೇಶಾಂಗ ಸಚಿವರು, ರಕ್ಷಣಾ ಮಂಡಳಿ ಕಾರ್ಯದರ್ಶಿ, ಕೇಂದ್ರ ಬ್ಯಾಂಕ್ ಗವರ್ನರ್ ಮತ್ತು ಹಲವಾರು ಸಂಸತ್ ಸದಸ್ಯರು ಸೇರಿದಂತೆ ಹಿರಿಯ ರಾಜಕೀಯ, ಮಿಲಿಟರಿ ಮತ್ತು ಆರ್ಥಿಕ ಅಧಿಕಾರಿಗಳು ಸೇರಿದ್ದಾರೆ.ತಾತ್ಕಾಲಿಕ ಕದನ ವಿರಾಮಕ್ಕೆ ಸಂಬಂಧಿಸಿದ ಬದ್ಧತೆಗಳನ್ನು ಉಲ್ಲಂಘಿಸಿದ್ದಾರೆ ಎಂದು ಎರಡೂ ಕಡೆಯವರು ಪರಸ್ಪರ ಆರೋಪ ಮಾಡುತ್ತಿದ್ದರೂ, ಅಮೆರಿಕ ಉಪಾಧ್ಯಕ್ಷ ಜೆ ಡಿ ವ್ಯಾನ್ಸ್ ನೇತೃತ್ವದ ಅಮೆರಿಕದ ನಿಯೋಗವು ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ವರ್ ಅವರೊಂದಿಗೆ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಆಗಮಿಸಿದೆ.
ಈ ಮಹತ್ವದ ರಾಜತಾಂತ್ರಿಕ ಸಭೆಗಾಗಿ ಇಸ್ಲಾಮಾಬಾದ್‌ನಲ್ಲಿ 10,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮಾತುಕತೆ ನಡೆಯಲಿರುವ ರೆಡ್ ಝನ್ ಅನ್ನು ಸಂಪೂರ್ಣ ವಾಗಿ ಸೀಲ್ ಮಾಡಲಾಗಿದ್ದು, ಪ್ರವೇಶ ಮತ್ತು ನಿರ್ಗಮನ ದಾರಿಗಳಲ್ಲಿ ವಿಶೇಷ ಚೆಕ್‌ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಖಿ, ''ಈ ಜಾಗತಿಕ ಮಾತುಕತೆಗೆ ಆತಿಥ್ಯ ವಹಿಸುತ್ತಿರುವುದು ಪಾಕ್‌ಗೆ ಸಂದ ಗೌರವ' ಎಂದು ಬಣ್ಣಿಸಿದ್ದಾರೆ.
