ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ದರ ಏಕಾಏಕಿ ಏರಿಕೆ - ಪೆಟ್ರೋಲ್ 5 ರೂ.ಡೀಸೆಲ್ 3 ರೂ.ಹೆಚ್ಚಳ



ಬೆಂಗಳೂರು: ಈಗಾಗಲೇ ಗ್ಯಾಸ್ ದರ ಏರಿಕೆ ಹಾಗೂ ಹೋಟೆಲ್ ತಿಂಡಿಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನ ಸಾಮಾನ್ಯರಿಗೆ ಈಗ ಮತ್ತೊಂದು ಆಘಾತ ಎದುರಾಗಿದೆ. ಖಾಸಗಿ ಇಂಧನ ಕಂಪನಿಯಾದ ‘ನಯಾರಾ’ (Nayara) ತನ್ನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏಕಾಏಕಿ ಏರಿಕೆ ಮಾಡಿದೆ.

ನಯಾರಾ ಬಂಕ್‌ಗಳಲ್ಲಿ ಬೆಲೆ ಏರಿಕೆ ವಿವರ

ನಯಾರಾ ಪೆಟ್ರೋಲ್ ಬಂಕ್‌ಗಳಲ್ಲಿ ಇಂದು ಬೆಳಿಗ್ಗೆಯಿಂದಲೇ ಜಾರಿಗೆ ಬರುವಂತೆ ಇಂಧನ ದರದಲ್ಲಿ ಭಾರೀ ಏರಿಕೆ ಮಾಡಲಾಗಿದೆ. ವಿಶೇಷವಾಗಿ ಪೆಟ್ರೋಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ 5 ರೂಪಾಯಿ ಹಾಗೂ ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಳ ಮಾಡಲಾಗಿದೆ.

ಪೆಟ್ರೋಲ್ ನಿನ್ನೆ ಲೀಟರ್​ಗೆ 103.16 ರೂಪಾಯಿ ಇದ್ದರೆ ಇವತ್ತು 108.16 ಆಗುವ ಮೂಲಕ 5 ರೂಪಾಯಿ ಏರಿಸಿದ್ದಾರೆ. ಇನ್ನು ಡಿಸೇಲ್ ನಿನ್ನೆ ಲೀಟರ್​ಗೆ 90.99 ರೂಪಾಯಿ ಇತ್ತು, ಇಂದು ಮೂರು ರೂಪಾಯಿ ಏರಿಕೆ ಕಂಡು 93.99 ರೂಪಾಯಿ ಆಗಿದೆ.

ಸರ್ಕಾರಿ ಸ್ವಾಮ್ಯದ ಪೆಟ್ರೋಲ್ ಬಂಕ್‌ಗಳಿಗೆ ಹೋಲಿಸಿದರೆ ನಯಾರಾ ಬಂಕ್‌ಗಳಲ್ಲಿ ಈ ದರ ವ್ಯತ್ಯಾಸ ಎದ್ದು ಕಾಣುತ್ತಿದೆ. ಬೆಳಿಗ್ಗೆ ವಾಹನಗಳಿಗೆ ಇಂಧನ ತುಂಬಿಸಲು ಹೋದ ಗ್ರಾಹಕರು ಈ ಏಕಾಏಕಿ ಏರಿಕೆಯನ್ನು ಕಂಡು ಕಂಗಾಲಾಗಿದ್ದಾರೆ. ಈಗಾಗಲೇ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಕಷ್ಟಪಡುತ್ತಿರುವ ಜನರಿಗೆ, ಇಂಧನ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸದ್ಯಕ್ಕೆ ಈ ದರ ಏರಿಕೆ ಕೇವಲ ನಯಾರಾ ಬಂಕ್‌ಗಳಿಗೆ ಮಾತ್ರ ಸೀಮಿತವಾಗಿದೆಯೇ ಅಥವಾ ಇತರ ಕಂಪನಿಗಳೂ ದರ ಹೆಚ್ಚಿಸಲಿವೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.