![]() |
| ಸಾಂದರ್ಭಿಕ ಚಿತ್ರ |
ಕುಂದಾಪುರ: ಆನ್‌ಲೈನ್ ಬಿಟ್‌ಕಾಯಿನ್ ಹೂಡಿಕೆ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ ಹಾಗೂ ಜಾತಿ ನಿಂದನೆ ಆರೋಪದ ಪ್ರಕರಣ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಹಾಲಾಡಿ ಗ್ರಾಮದ ಯಶೋಧ (43) ಅವರು ನೀಡಿದ ದೂರಿನಂತೆ, ಅಂಕದಕಟ್ಟೆಯ ಚಂದ್ರಿಕಾ (38) ಹಾಗೂ ಶಿವಮೊಗ್ಗ ಮೂಲದ ಭಾಸ್ಕರ (45) ಇವರು ಬಿಟ್‌ಕಾಯಿನ್ ಖರೀದಿ ಮಾಡಿ ಹಣವನ್ನು ದ್ವಿಗುಣ ಮಾಡಿ ಕೊಡಲಾಗುವುದಾಗಿ ನಂಬಿಸಿದ್ದಾರೆ. ಈ ಸಂಬಂಧ ಬೈಂದೂರು ಮೂಲದ ಪ್ರದೀಪ್ ಶೆಟ್ಟಿ ಮೂಲಕ ಅಂಕದಕಟ್ಟೆ ಸಹನಾ ಹಾಲ್ ಸಮೀಪ ಇರುವ ಚಂದ್ರಿಕಾ ಅವರ ಕಚೇರಿಗೆ ಹಣ ನೀಡುವಂತೆ ಸೂಚಿಸಲಾಗಿದೆ.
ದೂರುದಾರರು ಕಚೇರಿಗೆ ಭೇಟಿ ನೀಡಿದಾಗ, ಆರೋಪಿಗಳು ನಕಲಿ ದಾಖಲೆಗಳನ್ನು ತೋರಿಸಿ ಬಿಟ್‌ಕಾಯಿನ್ ವ್ಯವಹಾರ ಕಾನೂನಾತ್ಮಕವಾಗಿದ್ದು ಲೈಸೆನ್ಸ್ ಹೊಂದಿರುವುದಾಗಿ ಸುಳ್ಳು ಮಾಹಿತಿ ನೀಡಿ ನಂಬಿಸಿ, 11/12/2024 ರಂದು ಮೊದಲಿಗೆ ₹3.80 ಲಕ್ಷ ಪಡೆದುಕೊಂಡಿದ್ದಾರೆ. ನಂತರ ಹಂತ ಹಂತವಾಗಿ ಒಟ್ಟು ₹17 ಲಕ್ಷ ಹೂಡಿಕೆ ಮಾಡಿಸಿಕೊಂಡಿದ್ದಾರೆ.
ಆದರೆ ಹೂಡಿಕೆ ಸಂಬಂಧಿತ ಬಾಂಡ್ ನೀಡದೇ ಕಾಲಹರಣ ಮಾಡುತ್ತಾ ಬಂದಿದ್ದು, ಹಣದ ಬಗ್ಗೆ ವಿಚಾರಿಸಿದಾಗ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿ ಆಧಾರಿತ ಅವಮಾನ ಮಾಡಿ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಇದೇ ರೀತಿಯಲ್ಲಿ ಪಿರ್ಯಾದಿದಾರರ ಅಣ್ಣ ಶಂಕರ ನಾಯ್ಕ, ಅವರ ಪತ್ನಿ ಲೀಲಾ ಹಾಗೂ ಪರಿಚಯದ ನಾಗಶ್ರೀ ಅವರಿಂದಲೂ ಹಣ ಪಡೆದು ವಂಚಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 24/2026ರಡಿ ಭಾರತೀಯ ನ್ಯಾಯ ಸಂಹಿತೆಯ ಕಲಂಗಳು 318(2), 318(4), 336(2), 352, 351(2) ಜೊತೆಗೆ 3(5) ಹಾಗೂ ಎಸ್‌ಸಿ/ಎಸ್‌ಟಿ ಅಟ್ರಾಸಿಟಿ ಕಾಯ್ದೆಯ 3(1)(r)(s), 3(2)(v-a) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
