ಮಣಿಪಾಲ ಎಂಎಸ್‌ಡಿಸಿಯಲ್ಲಿ ಉಚಿತ ಭಾಷ್ ಲೀಪ್ ತರಬೇತಿ



ಉಡುಪಿ : ಮಣಿಪಾಲದ ಡಾ.ಟಿಎಂಎ ಪೈ ಪಾಲಿಟೆಕ್ನಿಕ್ ಆವರಣದಲ್ಲಿರುವ ಮಣಿಪಾಲ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್(ಎಂಎಸ್‌ಡಿಸಿ) ನಲ್ಲಿ ಬಾಷ್(ಬಿಓಎಸ್‌ ಸಿಎಚ್) ಇಂಡಿಯಾ ಫೌಂಡೇಶನ್ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಎರಡು ತಿಂಗಳ ಉದ್ಯೋಗ ಖಾತ್ರಿ ಭರವಸೆಯೊಂದಿಗೆ ಉಚಿತ ` ಭಾಷ್ ಲೀಪ್ ತರಬೇತಿ ' ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಈ ಬಗ್ಗೆ ಎಂಎಸ್‌ಡಿಸಿ ಚೇರ್‌ಮ್ಯಾನ್ ಬ್ರಿಗೇಡಿಯರ್ ಡಾ.ಸುರ್ಜಿತ್ ಸಿಂಗ್ ಪಾಬ್ಲ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ತರಬೇತಿಗೆ ಪ್ರತಿ ಬ್ಯಾಚ್‌ನಲ್ಲಿ 25 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು, ಈಗಾಗಲೇ ಒಂದು ಬ್ಯಾಚ್‌ನ ತರಬೇತಿ ಪೂರ್ಣಗೊಂಡಿದೆ. ಬಹುತೇಕ ಎಲ್ಲರಿಗೂ ಉದ್ಯೋಗಾವಕಾಶ ದೊರೆತಿದೆ. ಇದು 2 ತಿಂಗಳ ಉಚಿತ ತರಬೇತಿಯಾಗಿದ್ದು, ತರಬೇತಿ ಎಂಎಸ್‌ಡಿಸಿಯಲ್ಲೇ ನಡೆಯುತ್ತದೆ ಎಂದು ಅವರು ತಿಳಿಸಿದರು.

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ, ಡಿಪ್ಲೊಮಾ ಕೋರ್ಸ್ ಪೂರೈಸಿದವರು ಈ ಕೋರ್ಸ್  ಗೆ ಅರ್ಜಿ ಸಲ್ಲಿಸಬಹುದು. ಉದ್ಯೋಗಾಧಾರಿತ ಕೌಶಲತೆಯನ್ನು ಈ ಕೋರ್ಸ್ ಮೂಲಕ ನೀಡಲಾಗುವುದು. ಜೊತೆಗೆ ಎಂಎಸ್‌ಡಿಸಿಯಲ್ಲಿ ಇನ್ನೂ ಅನೇಕ ಅಲ್ಪಾವಧಿ ಹಾಗೂ ದೀರ್ಘಾವಧಿಯ ಕೋರ್ಸ್ ಗಳು ಲಭ್ಯವಿವೆ. ಮಣಿಪಾಲದ ಹೊರವಲಯದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಉದ್ಯೋಗಾಂಕ್ಷಿ ಯುವ ಜನತೆಯನ್ನು ಈ ಕೋರ್ಸ್ ಗೆ ಆಕರ್ಷಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಆಡಳಿತದೊಂದಿಗೆ ಎಂಎಸ್‌ಡಿಸಿ ಮಾತುಕತೆ ನಡೆಸಿದೆ ಎಂದು ಡಾ.ಪಾಬ್ಲಾ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಎಂಎಸ್‌ಡಿಸಿ ರಿಜಿಸ್ಟ್ರಾರ್, ಡಾ.ಅಂಜಯ್ಯ , ಮಾರ್ಕೆಟಿಂಗ್ ಹೆಡ್ ಡಾ. ಕ್ರಿಷ್ಮಾ ಎಂ.ಜಾಧವ್, ತೆಂಕನಿಡಿಯೂರು ಗ್ರಾಪಂ ಉಪಾಧ್ಯಕ್ಷ ಅರುಣ್ ಜತ್ತನ್ನ, ಸದಸ್ಯ ಸತೀಶ್ ನಾಯ್ಕ್, ಪಿಡಿಓ ದಯಾನಂದ ಬೆನ್ನೂರು ಉಪಸ್ಥಿತರಿದ್ದರು.