ಉಡುಪಿ: ಕರು ಕಳವು ಮಾಡಿ ಕಸಾಯಿಖಾನೆಗೆ ಮಾರಾಟ ಯತ್ನ - ಆರೋಪಿಗಳಾದ ರಾಘವೇಂದ್ರ, ಸುಧೀಂದ್ರ ಶೆಟ್ಟಿ ಬಂಧನ



ಉಡುಪಿ: ಪೆರ್ಡೂರು ಗ್ರಾಮದಲ್ಲಿ ಕರು ಕಳವು ಮಾಡಿ ಕಸಾಯಿಖಾನೆಗೆ ಮಾರಾಟ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಹಿರಿಯಡಕ ಪೊಲೀಸರು ಬಂಧಿಸಿದ್ದಾರೆ.

ದಿನಾಂಕ 17/02/2026 ರಂದು ರಾತ್ರಿ ಸುಮಾರು 10:30 ಗಂಟೆಗೆ ರಾಘವೇಂದ್ರ ಮತ್ತು ಸುಧೀಂದ್ರ ಅವರು  ಪೆರ್ಡೂರು ದೇವಸ್ಥಾನದ ಎದುರಿನ ಗದ್ದೆಯಲ್ಲಿದ್ದ ಕರುವನ್ನು ಕಳವು ಮಾಡಿ, ಕಸಾಯಿಖಾನೆಗೆ ಮಾರಾಟ ಮಾಡುವ ಉದ್ದೇಶದಿಂದ ಆಟೋ ರಿಕ್ಷಾದಲ್ಲಿ ಸಾಗಿಸಲು ಯತ್ನಿಸಿದರೆಂದು ಆರೋಪಿಸಲಾಗಿದೆ.

ಈ ಕುರಿತು ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 14/2026 ಅಡಿ ಕಲಂ 303(2), 62 BNS ಹಾಗೂ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ 2020ರ ಕಲಂ 5, 12ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು ಅವರ ನಿರ್ದೇಶನದಂತೆ, ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಗೋಪೀಕೃಷ್ಣ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ರಾಘವೇಂದ್ರ (36) ಮತ್ತು ಸುಧೀಂದ್ರ ಶೆಟ್ಟಿ @ ಬಾಬು (36) ಎಂಬಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. 

ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಕೃತ್ಯಕ್ಕೆ ಬಳಸಿದ ಆಟೋ ರಿಕ್ಷಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.