ಉಡುಪಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ಜನವರಿ 18ರಂದು ಶಿರೂರು ಶ್ರೀಗಳ ಸರ್ವಜ್ಞ ಪೀಠಾರೋಹಣ ನಡೆದಿದೆ. ಇನ್ನು ಎರಡು ವರ್ಷಗಳ ಕಾಲ ಶೀರೂರು ವೇದವರ್ಧನ ಶ್ರೀಗಳು ಪರ್ಯಾಯ ನಡೆಸಲಿದ್ದಾರೆ. ಇದೇ ವೇಳೆ ಕೃಷ್ಣಮಠದಲ್ಲಿ ಮಹತ್ವದ ಬದಲಾವಣೆ ಬಂದಿದ್ದು ಇನ್ನು ಮುಂದೆ ಭಕ್ತರು ಇಷ್ಟ ಬಂದಂತೆ ಬಟ್ಟೆಗಳನ್ನು ಹಾಕಿಕೊಂಡು ಬರುವಂತಿಲ್ಲ.
ಶೀರೂರು ಪರ್ಯಾಯ ಮಹೋತ್ಸವದ ದಿನದಂದೇ ಅಂದರೆ ಜನವರಿ 18 ರಿಂದಲೇ ಈ ಹೊಸ ಡ್ರೆಸ್ ಕೋಡ್ ಜಾರಿಗೆ ಬಂದಿದೆ. ಅದರಂತೆ ಪುರುಷರು ಅಥವಾ ಸ್ತ್ರೀಯರು ಬರ್ಮುಡಾ ಅಥವಾ ಸ್ಕರ್ಟ್ ಧರಿಸಿಕೊಂಡು ಬರುವಂತಿಲ್ಲ ಎಂಬ ಹೊಸ ನಿಯಮ ತರಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪರ್ಯಾಯ ಶೀರೂರು ಶ್ರೀಕೃಷ್ಣ ಮಠದ ದಿವಾನರಾದ ಡಾ. ಎಂ ಉದಯ ಕುಮಾರ್ ಸರಳತ್ತಾಯ, ಬೆಳಗ್ಗಿನಿಂದ ರಾತ್ರಿ ತನಕ ಕೃಷ್ಣಮಠದಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಿರುತ್ತವೆ. ವೇದಘೋಷಗಳು ನಡೆಯುತ್ತಿರುತ್ತವೆ. ಈ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಬರುವವರು ಕೃಷ್ಣನ ಭಕ್ತರಾಗಿ ದರ್ಶನಕ್ಕೆ ಬರಬೇಕು. ಕೃಷ್ಣಮಠದ ಮಹಾದ್ವಾರದ ಒಳಗೆ ಬರುವಾಗ ಪುರುಷರು ಅಂಗಿ ತೆಗೆದು ಒಳಗೆ ಪ್ರವೇಶಿಸಬೇಕು. ಈ ಬದಲಾವಣೆಯನ್ನು ಭಕ್ತರು ಗಮನಿಸಬೇಕು ಎಂದು ಮನವಿ ಮಾಡಿದ್ದಾರೆ.
