![]() |
| ಯಶ್ಪಾಲ್ ಸುವರ್ಣ |
ಉಡುಪಿ: ಉಡುಪಿ ಪರ್ಯಾಯ ಮಹೋತ್ಸವ ಯಶಸ್ವಿಯಾಗಿ ಮುಗಿದಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅತ್ಯಂತ ಯಶಸ್ವಿಯಾಗಿ ಪರ್ಯಾಯ ಮಹೋತ್ಸವವನ್ನು ಮಾಡಿದೆ. ಆದರೆ ಇದನ್ನು ಸಹಿಸದ ಕೆಲವರು ಟೀಕೆ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಯವರು ಭಗವಾದ್ವಜದ ಮೂಲಕ ಪರ್ಯಾಯಕ್ಕೆ ಚಾಲನೆ ನೀಡಿದ್ದಾರೆ .ಬಹುಶಃ ಕಾಂಗ್ರೆಸಿಗರು ಅದನ್ನು ಪಾಕಿಸ್ತಾನದ ಧ್ವಜ ಎಂಬ ರೀತಿಯಲ್ಲಿ ಟೀಕೆ ಮಾಡುತ್ತಿದ್ದಾರೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ತಿರುಗೇಟು ನೀಡಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು , ಪರ್ಯಾಯ ಮಹೋತ್ಸವವು ಅಷ್ಟಮಠಾಧೀಶರು ಭಾಗವಹಿಸಿದ್ದ ಪುಣ್ಯವೇದಿಕೆಯಾಗಿತ್ತು. ಕಳೆದ ಬಾರಿ ಕೂಡ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರು ಭಗವಾದ್ವಜದ ಮೂಲಕವೇ ಚಾಲನೆ ನೀಡಿದ್ದರು.ಈ ಬಾರಿ ಕೂಡ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅವರು ಭಗವಾದ್ವಜದ ಮೂಲಕ ಚಾಲನೆ ನೀಡಿದ್ದಾರೆ. ಕಾಂಗ್ರೆಸ್ಸಿಗರಿಗೆ ಅದನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಬಹುಶಃ ಕಾಂಗ್ರೆಸ್ಸಿಗರು ಟೀಕೆ ಮಾಡುವ ರೀತಿ ನೋಡಿದರೆ ಎಲ್ಲೋ ಪಾಕಿಸ್ತಾನದ ಧ್ವಜದ ಮೂಲಕ ಚಾಲನೆ ನೀಡಿದ್ದಾರೆ ಎಂಬ ರೀತಿಯಲ್ಲಿ ಟೀಕಿಸುತ್ತಿದ್ದಾರೆ ಎಂದು ಯಶ್ಪಾಲ್ ಹೇಳಿದ್ದಾರೆ.
ಕಾಂಗ್ರೆಸ್ ನವರು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಮಾತನಾಡಲಿ. ಪರ್ಯಾಯ ಮಹೋತ್ಸವಕ್ಕೆ 6 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂಬ ವಿಷಯವನ್ನು ಇಟ್ಟುಕೊಂಡು ಪ್ರಚಾರ ಮಾಡಿದ್ದಾರೆ. ಆದರೆ ಆ 6 ಕೋಟಿಯಲ್ಲಿ ಯಾವುದಕ್ಕೆ ಎಷ್ಟು ಅನುದಾನ ಬಿಡುಗಡೆಯಾಗಿದೆ ? ಅದರಲ್ಲಿ ಯಾವ ಕಾಮಗಾರಿಗಳು ನಡೆದಿವೆ ಎಂಬ ಲೆಕ್ಕವನ್ನು ಕಾಂಗ್ರೆಸ್ ನವರು ಮೊದಲು ಕೊಡಲಿ, ಅದು ಬಿಟ್ಟು ಪರ್ಯಾಯ ಮಹೋತ್ಸವದ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ಇದನ್ನು ಉಡುಪಿಯ ಜನರು ಅರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
