ಬೆಂಗಳೂರು: ಸಾಹಿತ್ಯ, ಶಿಕ್ಷಣ ಮತ್ತು ಸಮಾಜಸೇವೆಯ ಕ್ಷೇತ್ರಗಳಲ್ಲಿ ತಮ್ಮ ನಿರಂತರ ಹಾಗೂ ಮೌಲ್ಯಾಧಾರಿತ ಸೇವೆಯ ಮೂಲಕ ಗಮನ ಸೆಳೆದಿರುವ ಡಾ. ಎಂ.ಜಿ. ಪ್ರಿಯಾಂಕ ಅವರಿಗೆ 2026ನೇ ಸಾಲಿನ “ಶಿಕ್ಷಕ ರತ್ನ ಪ್ರಶಸ್ತಿ” ಪ್ರದಾನ ಮಾಡಲಾಗಿದೆ.
ಶ್ರೀಮತಿ ಎಸ್.ಆರ್. ಗೀತಾ ಹಾಗೂ ಶ್ರೀ ಎಸ್.ಜೆ. ಮಲ್ಲಿಕಾರ್ಜುನ್ ದಂಪತಿಯ ಸುಪುತ್ರಿಯಾದ ಡಾ. ಎಂ.ಜಿ. ಪ್ರಿಯಾಂಕ ಅವರು ಖ್ಯಾತ ಅಂಕಣಕಾರರಾಗಿದ್ದು, ಸಮಾಜದಲ್ಲಿ ಧನಾತ್ಮಕ ಚಿಂತನೆಯ ಮೂಲಕ ಯುವಪೀಳಿಗೆಯಲ್ಲಿ ಬದುಕಿನ ಭರವಸೆಯನ್ನು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅಪಾರ ಪಾಂಡಿತ್ಯ ಹೊಂದಿರುವ ಅವರು ಈ ಎರಡು ಭಾಷೆಗಳಲ್ಲಿ ಹದಿನೈದಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ.
ಉತ್ತಮ ಸಂಘಟಕಿಯೂ ಸಂಪನ್ಮೂಲ ವ್ಯಕ್ತಿಯೂ ಆಗಿರುವ ಡಾ. ಪ್ರಿಯಾಂಕರು ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಅನೇಕ ವಿದ್ವತ್ಪೂರ್ಣ ಉಪನ್ಯಾಸಗಳನ್ನು ನೀಡಿದ್ದಾರೆ. ತಮ್ಮ ಸಾಕ್ಷಿ ಪ್ರತಿಷ್ಠಾನದ ಮೂಲಕ ಕನ್ನಡ ಸಾಹಿತ್ಯದ ಕಾಯಕವನ್ನು ಶ್ರದ್ಧೆ ಹಾಗೂ ಸಮರ್ಪಣೆಯೊಂದಿಗೆ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಸದಾ ಸಕ್ರಿಯರಾಗಿರುವ ಅವರ ಸಾಹಿತ್ಯ ಹಾಗೂ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ, ಬೆಂಗಳೂರಿನ ಯುನೈಟೆಡ್ ಚಾರಿಟೇಬಲ್ ಟ್ರಸ್ಟ್ ಸಂಸ್ಥೆಯು ಈ ಗೌರವವನ್ನು ನೀಡಿದೆ.
ದಿನಾಂಕ 03.12.2026 ರಂದು ಬೆಂಗಳೂರಿನ ಇಂಡಿಯನ್ ಸೋಶಿಯಲ್ ಇನ್ಸ್ಟಿಟ್ಯೂಟ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ರಮೇಶ್ ಬಿ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ನರ ವಿಜ್ಞಾನಿ ಹಾಗೂ ಐಐಎಂಎಸ್‌ಟಿಸಿ ಅಧ್ಯಕ್ಷರಾದ ಡಾ. ಶ್ರೀಧರ್ ಸರಸ್ವತಿ ಗುರುಜಿ, ಶಿಕ್ಷಣ ತಜ್ಞ ಹಾಗೂ ಅನ್ವಯಿಕ ಮನೋವಿಜ್ಞಾನಿ ಪ್ರೊ. ಅನಿಲ್ ಕುಮಾರ್ ಎನ್. ಜೋಶಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
