ಬೆಂಗಳೂರು: ಕಳ್ಳನ ಕಾರಿನಿಂದ ಹಣ ಕದ್ದು ಸಿಕ್ಕಿಬಿದ್ದ ಹೆಡ್ ಕಾನ್‌ಸ್ಟೆಬಲ್ !



ಬೆಂಗಳೂರು: ನಗರ ಪೊಲೀಸ್ ಕಮಿಷನರ್ ಕಚೇರಿ ಆವರಣದಲ್ಲಿ ನಿಲುಗಡೆ ಮಾಡಿದ್ದ ಕಾರಿನಲ್ಲಿದ್ದ 11 ಲಕ್ಷ ರೂ. ಹಣ ಕದ್ದು ನಾಟಕವಾಡಿದ್ದ ಸೈಬ‌ರ್ ಅಪರಾಧ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಜಬೀವುಲ್ಲಾ  ಪೊಲೀಸರಿಗೆ ಸಿಕ್ಕಿ ಹಾಕಿಕೊಂಡಿದ್ದಾನೆ.ಸೈಬ‌ರ್ ಅಪರಾಧ ಪ್ರಕರಣವೊಂದರಲ್ಲಿ ಬಂಧಿಸಲಾಗಿದ್ದ ಆರೋಪಿಯನ್ನು ಕಮಿಷನ‌ರ್ ಕಚೇರಿ ಆವರಣದಲ್ಲಿರುವ ಸಿಸಿಬಿ ಸೈಬ‌ರ್ ಕ್ರೈಂ ಠಾಣೆಗೆ ವಿಚಾರಣೆಗೆಂದು ತನಿಖಾಧಿಕಾರಿಗಳು ಕರೆತಂದಿದ್ದರು. ಜಪ್ತಿ ಮಾಡಿಕೊಂಡಿದ್ದ ಆರೋಪಿಯ ಕಾರನ್ನು ಸಹ ತಂದಿದ್ದರು. ಆ ಕಾರಿನಲ್ಲಿದ್ದ ಹಣವನ್ನು ಜಬೀವುಲ್ಲಾ ಕಳ್ಳತನ ಮಾಡಿದ್ದ ಎಂದು ತಿಳಿದುಬಂದಿದೆ.

ವಿಚಾರಣೆಗೆ ತೆರಳುವ ಮುನ್ನ ಆರೋಪಿ ತನ್ನ ಕಾರಿನಲ್ಲಿ 11 ಲಕ್ಷ ನಗದು ಇದ್ದ ಬ್ಯಾಗ್ ಇಟ್ಟಿದ್ದ. ವಿಚಾರಣೆಯ ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಆರೋಪಿಯನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಕೆಲವು ದಿನಗಳ ಬಳಿಕ ಆರೋಪಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ. ಆಗ ಆರೋಪಿ ತನ್ನ ಕಾರು ಪರಿಶೀಲಿಸಿದಾಗ, ಬ್ಯಾಗ್‌ನಲ್ಲಿದ್ದ ಹಣ ನಾಪತ್ತೆ ಆಗಿರುವುದು ಗೊತ್ತಾಗಿತ್ತು.

ತಕ್ಷಣವೇ ಆರೋಪಿಯು ಸೈಬ‌ರ್ ಠಾಣೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ಈ ವಿಷಯ ತಂದಿದ್ದ. ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿ ಪರಿಶೀಲಿಸಿದಾಗ ಹೆಡ್ ಕಾನ್‌ಸ್ಟೆಬಲ್ ಜಬೀವುಲ್ಲಾ, ಬ್ಯಾಗ್ ಕಳ್ಳತನ ಮಾಡಿಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿತ್ತು. ಕೃತ್ಯ ಎಸಗಿದ ಬಳಿಕ ಹೆಡ್ ಕಾನ್‌ಸ್ಟೆಬಲ್‌ ಕೆಲವು ದಿನ ತಮಗೆ ಏನೂ ಗೊತ್ತೇ ಇಲ್ಲ ಎಂಬಂತೆ, ಕರ್ತವ್ಯಕ್ಕೆ ಹಾಜರಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.