![]() |
| ಹರೀಶ್ ರಾಯ್ |
ಹರೀಶ್ ರಾಯ್. ಈ ನಟನನ್ನು ಕನ್ನಡ ಚಿತ್ರರಂಗ ಮೊದಲ ಬಾರಿಗೆ ಗುರುತಿಸಿದ್ದು ಓಂ ಚಿತ್ರದಲ್ಲಿ. ಕುತ್ತಿಗೆಯವರೆಗೆ ಇಳಿಬಿದ್ದ ಉದ್ದನೆಯ ಕೂದಲು, ಸಣಕಲು ಎನ್ನಬಹುದಾದ ಸ್ಲಿಮ್ ದೇಹ, ಸ್ವಲ್ಪ ಕೀರಲು ಎನ್ನಬಹುದಾದ ಧ್ವನಿ ಮತ್ತು ಪವರ್ ಫುಲ್ ಎನಿಸುತ್ತಿದ್ದ ಕಣ್ಣುಗಳು. ಓಂನಲ್ಲಿ ಮುತ್ತಪ್ಪ ರೈ ಕ್ಯಾರೆಕ್ಟರ್ ಮಾಡಿದ್ದ ಹರೀಶ್ ರೈ ಅಥವಾ ರಾಯ್ ಅವರ ಮೂಲ ಹೆಸರು ಇದ್ಯಾವುದೂ ಅಲ್ಲ. ಹರೀಶ್ ಆಚಾರ್ಯ.
ಉಡುಪಿಯವರಾದ ಹರೀಶ್ ಅವರ ತಾಯಿಯ ತಂದೆ ಚಿನ್ನದ ಅಂಗಡಿ ಮಾಲೀಕರಾದರೆ, ತಂದೆ ಜಮೀನ್ದಾರರು. ಟೆನೆನ್ಸಿ ಆಕ್ಟ್ (ಉಳುವವನೇ ಭೂಮಿಯ ಒಡೆಯ) ಕಾಯ್ದೆಯ ನಂತರ ಹರೀಶ್ ಆಚಾರ್ಯ ಅವರ ಕುಟುಂಬದ ಬಹುತೇಕ ಜಮೀನು, ತೋಟ ಗದ್ದೆಗಳು ಕೈಬಿಟ್ಟವಂತೆ. ಒಂದಿಷ್ಟು ತೋಟ ಇತ್ತು. ಅಷ್ಟೇ ಎನ್ನುತ್ತಿದ್ದ ಹರೀಶ್ ಬೆಳೆದಿದ್ದು ಬೇರೆಯವರ ಮನೆಯಲ್ಲಿ. ಶಾಲೆಯಲ್ಲಿ ಭಯಂಕರ ತುಂಟನಾಗಿದ್ದ ಹರೀಶ್, 10ನೇ ಕ್ಲಾಸ್ ಓದುತ್ತಿರುವಾಗಲೇ ಬಾಂಬೆಗೆ ಹೋದವರು. ಅಪ್ಪನನ್ನು ಸ್ಕೂಲಿಗೆ ಕರೆದುಕೊಂಡು ಬಾ ಎಂದು ಮೇಷ್ಟರು ಹೇಳಿದ್ದಕ್ಕೆ ಉಡುಪಿಯನ್ನೇ ಬಿಟ್ಟು ಹೋದ ಹರೀಶ್ ರಾಯ್, ಮುಂಬೈ ಹೋಟೆಲ್ಲೊಂದರಲ್ಲಿ ಕೆಲಸ ಮಾಡಿದರು. ಅಲ್ಲಿದ್ದವರಿಗೆ ಹರೀಶ್ ರಾಯ್ ಅವರ ಹಿನ್ನೆಲೆ ಗೊತ್ತಾಗಿ ಊರಿಗೆ ಕಳಿಸಿದರೂ.. ಅಷ್ಟು ಹೊತ್ತಿಗಾಗಲೇ ಬಾಂಬೆಯಲ್ಲಿದ್ದ ಕೆಲವು ಭೂಗತ ಜಗತ್ತಿನ ಚೋಟು ಮೋಟುಗಳ ಪರಿಚಯ ಆಗಿತ್ತು. ಒರಟುತನ ಹರೀಶ್ ರಾಯ್ ಅವರ ವ್ಯಕ್ತಿತ್ವದಲ್ಲೇ ಇತ್ತು.
1992, ನವೆಂಬರ್ 13. ಉಡುಪಿಯಲ್ಲಿ ಹರೀಶ್ ರಾಯ್ ಅವರು ಗ್ಯಾಂಗ್ ಕಟ್ಟಿಕೊಂಡು ಹೋಗಿ ಜಯರಾಮ್ ಎಂಬ ಸ್ಕೂಲ್ ಮಾಸ್ಟರ್ʻರನ್ನು ಹೊಡೆದು ಬಂದಿದ್ದರು. ಯಾವ ಮಟ್ಟಿಗೆ ಹೊಡೆದಿದ್ದರೆಂದರೆ ಒಂದು ವಾರ ಆಸ್ಪತ್ರೆಯಲ್ಲಿದ್ದ ಜಯರಾಮ್, ಅಲ್ಲಿಯೇ ಪ್ರಾಣ ಬಿಟ್ಟಿದ್ದರು. ಕೊಲೆ ಕೇಸ್ ಬೆನ್ನು ಹತ್ತಿದ್ದೇ ಆಗ. ಆ ಕೇಸಿನ ಬಗ್ಗೆ ಹರೀಶ್ ರಾಯ್ ತಲೆಕೆಡಿಸಿಕೊಳ್ಳಲಿಲ್ಲ. 2003ರಲ್ಲಿ ಜೀವಾವಧಿ ಶಿಕ್ಷೆ ಆಯ್ತು. ಜೈಲು ಸೇರಿದ ಹರೀಶ್ ರಾಯ್, ಆಮೇಲೆ ಕೇಸಿನ ಬಗ್ಗೆ ತಲೆಕೆಡಿಸಿಕೊಂಡರು. ಜಯರಾಮ್ ಮೇಲೆ ಹಲ್ಲೆ ನಡೆದಾಗ ಹರೀಶ್ ರಾಯ್ ಸ್ಥಳದಲ್ಲೇ ಇರಲಿಲ್ಲ ಎಂದು ವಾದಿಸಿ ಗೆದ್ದರು. ಕೊನೆಗೆ ಹರೀಶ್ ರಾಯ್ ಖುಲಾಸೆಯಾದರು.
ಆದರೆ ಅಷ್ಟು ಹೊತ್ತಿಗೆ ಕೈಲಿದ್ದ ಹಲವು ಸಿನಿಮಾಗಳು ಕೈ ತಪ್ಪಿದ್ದವು. ಜೈಲಿನಿಂದ ಬಂದ ಮೇಲೆ ಹರೀಶ್ ರಾಯ್ ಬದಲಾಗಿದ್ದರು. ಆದರೆ.. ಈ ಹಿಂದೆ ನಟಿಸಿದ್ದ ಚಿತ್ರಗಳಲ್ಲಿ ಹರೀಶ್ ರಾಯ್ ಅವರ ಹುಚ್ಚು ವರ್ತನೆ, ಕುಡಿತಗಳನ್ನು ನೋಡಿದ್ದವರು ಹರೀಶ್ ರಾಯ್ ಹತ್ತಿರವೂ ಸುಳಿಯಲಿಲ್ಲ. ತಾನು ಬದಲಾಗಿದ್ದೇನೆ ಎಂದು ಸಾಬೀತು ಮಾಡುವಷ್ಟರಲ್ಲಿ ಹರೀಶ್ ರಾಯ್ ಅವರ ವೃತ್ತಿ ಜೀವನದ ಒಂದಷ್ಟು ವರ್ಷಗಳು ಕಳೆದು ಹೋಗಿದ್ದವು.
ನಿಜಕ್ಕೂ ಹರೀಶ್ ರಾಯ್ ಬದಲಾಗಿದ್ದರು. ಆದರೆ.. ಅಷ್ಟು ಹೊತ್ತಿಗೆ ಅವರ ದೇಹದಲ್ಲಿ ಕ್ಯಾನ್ಸರ್ ಎಂಬ ರೋಗ.. ರಕ್ತದ ಕಣಕಣದಲ್ಲೂ ಇಳಿದುಬಿಟ್ಟಿತ್ತು. ಹರೀಶ್ ರಾಯ್ ಅವರಿಗೆ ಮರುಗಿದವರು ಒಬ್ಬಿಬ್ಬರಲ್ಲ. ಅದಕ್ಕೆ ಕಾರಣವೂ ಇತ್ತು. ಅದು ಬದಲಾವಣೆ. ಹರೀಶ್ ರಾಯ್ ಅವರಿಂದ ತೊಂದರೆ ಅನುಭವಿಸಿದ್ದವರೂ.. ಈ ಮನುಷ್ಯ ಬದುಕಿ ಬಿಡಲಿ ಎಂದು ಪ್ರಾರ್ಥಿಸಿದ್ದರು. ಪ್ರಾರ್ಥನೆ ಫಲಿಸಲಿಲ್ಲ.
