
ಹೈಕೋರ್ಟ್-file photo
ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಮೃತದೇಹಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಗೆ ಸಂಬಂಧಿಸಿದ ಮುಂದಿನ ಎಲ್ಲ ಪ್ರಕ್ರಿಯೆಗೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ಬುಧವಾರ ತೆರವುಗೊಳಿಸಿದೆ.
ಹೈಕೋರ್ಟ್ ನ ಈ ಆದೇಶದಿಂದ ಎಸ್‌ಐಟಿ ತನಿಖೆ ಮುಂದುವರಿಯಲಿದ್ದು, ಪ್ರಕರಣದಲ್ಲಿ ಪಿತೂರಿ ನಡೆಸಿದ ಆರೋಪ ಎದುರಿಸುತ್ತಿರುವ ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಟಿ. ಜಯಂತ್ ಮತ್ತು ವಿಠಲೌಡ ಅವರಿಗೆ ಎಸ್‌ಐಟಿ ವಿಚಾರಣೆಗೆ ಹಾಜರಾಗಬೇಕಾದ ಅನಿವಾರ್ಯತೆ ಎದುರಾಗಿದೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್ (FIR No. 39/2025), ವಿಚಾರಣೆಗೆ ಹಾಜರಾಗಲು ಪೊಲೀಸರು ನೀಡಿರುವ ನೋಟಿಸ್ ಹಾಗೂ ಬೆಳ್ತಂಗಡಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದು ಕೋರಿ ಗಿರೀಶ್ ಮಟ್ಟಣ್ಣನವರ್ ಸೇರಿ ನಾಲ್ವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಮುಹಮ್ಮದ್ ನವಾಝ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಸಕಾರದ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ಎಫ್‌ಐಟಿಗೆ ತಡೆ ನೀಡಿ ಅಕ್ಟೋಬರ್ 30ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ತೆರವುಗೊಳಿಸಿತಲ್ಲದೆ, ಅರ್ಜಿಯನ್ನು ಮೆರಿಟ್ ಆಧಾರದಲ್ಲಿ ವಿಚಾರಣೆ ನಡೆಸುವುದಾಗಿ ತಿಳಿಸಿ, ವಿಚಾರಣೆಯನ್ನು ನವೆಂಬರ್ 28ಕ್ಕೆ ಮುಂದೂಡಿತು.