
ಉಡುಪಿ: ನಾಡೋಜ ಡಾ.ಜಿ.ಶಂಕರ್ ಕುರಿತ "ಸಮಾಜಸೇವಾ ಹರಿಕಾರ" ಪುಸ್ತಕ ಬಿಡುಗಡೆ
ಉಡುಪಿ: 70ನೇ ಹುಟ್ಟುಹಬ್ಬದ ಸವಿನೆನಪಿನೊಂದಿಗೆ ನಾಡೋಜ ಡಾ.ಜಿ.ಶಂಕರ್ ಕುರಿತ "ಸಮಾಜಸೇವಾ ಹರಿಕಾರ" ಪುಸ್ತಕವನ್ನು ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಭಾನುವಾರ ಅನಾವರಣಗೊಳಿಸಿದರು.
ಅಂಬಲಪಾಡಿ ಶಾಮಿಲಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಬಡ ಕುಟುಂಬದಲ್ಲಿ ಜನಿಸಿದ ಜಿ.ಶಂಕರ್ ಸ್ವಂತ ಪರಿಶ್ರಮದ ಮೂಲಕ ಔದ್ಯೋಗಿಕ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿ, ಸಮಾಜದ ಮೇರುವ್ಯಕ್ತಿಯಾಗಿದ್ದಾರೆ. ಗಳಿಸಿದ ಸಂಪತ್ತಿನ ಬಹುಪಾಲನ್ನು ಸಮಾಜಕ್ಕೆ ಮರಳಿಸುವ ಮೂಲಕ ಬಡವರಿಗೆ ನೆರವಾಗುತ್ತಿದ್ದಾರೆ.
ಶಿಕ್ಷಣ, ಆರೋಗ್ಯ ಮತ್ತು ಸಮಾಜ ಸೇವೆಯಲ್ಲಿ ಅನುಪಮ ಕೊಡುಗೆ ನೀಡುತ್ತಿರುವ ಅವರು ನಿಜಾರ್ಥದಲ್ಲಿ ಸಮಾಜಸೇವಾ ಹರಿಕಾರರಾಗಿದ್ದಾರೆ ಎಂದು ಹೇಳಿದರು.
ಪ್ರತಿಭಾವಂತ ಬಡ ಮಕ್ಕಳಿಗೆ ಶಿಕ್ಷಣಕ್ಕೆ ನೆರವು, ಸಾಮೂಹಿಕ ವಿವಾಹ, ರಕ್ತದಾನ ಶಿಬಿರ, ಯಕ್ಷಗಾನ ಕಲಾವಿದರಿಗೆ ನೆರವು ಹೀಗೆ ಅವರ ಬಹುಮುಖ ಸಮಾಜ ಸೇವೆ ಇತರರಿಗೆ ಮಾದರಿ. ಜಾತಿ, ಧರ್ಮ, ಲಿಂಗ ಭೇದವಿಲ್ಲದೇ ವಿವಿಧ ಕೊಡುಗೆಗಳನ್ನು ನೀಡುತ್ತಿರುವ ಡಾ.ಜಿ.ಶಂಕರ್ ಬೇರೆಯವರ ಏಳಿಗೆಗಾಗಿ ತನ್ನ ಬದುಕು ಎಂಬ ಭಾವದಿಂದ ಬಾಳುತ್ತಿರುವ ಆದರ್ಶ ವ್ಯಕ್ತಿ ಎಂದರು.ಪುಸ್ತಕದ ಲೇಖಕ ಉದಯಕುಮಾರ್ ಹಟ್ಟಿಯಂಗಡಿ ಹಾಗೂ ಸಾಹಿತಿ ಸಂಶೋಧಕಿ ಡಾ.ಗಾಯತ್ರಿ ನಾವಡ ಕೃತಿ ಪರಿಚಯಿಸಿದರು. ಡಾ.ಜಿ.ಶಂಕರ್ ಕೊಡುಗೆ ಅನ್ಯರಿಗೆ ಪ್ರೇರಣೆಯಾಗಲಿ ಎಂಬ ಆಶಯದಿಂದ ಅವರ ಸಾಧನೆಗಳ ಕೃತಿ ಹೊರತರಲಾಗಿದೆ ಎಂದರು.
ಅಂಬಲಪಾಡಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ವಿಶ್ವಸ್ಥೆ ಶ್ಯಾಮಿಲಿ ನವೀನ್, ಉಚ್ಚಿಲ ದ.ಕ. ಮೊಗವೀರ ಮಹಾಜನ ಸಂಘ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಸಂಶೋಧಕ- ಸಾಹಿತಿ ಪ್ರೊ.ಎ.ವಿ.ನಾವಡ, ಜಾನಪದ ಸಂಶೋಧಕ ಬನ್ನಂಜೆ ಬಾಬು ಅಮೀನ್ ಉಪಸ್ಥಿತರಿದ್ದರು.
ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ವಿಶ್ವಸ್ಥ ಆನಂದ ಎಸ್.ಕೆ. ಸ್ವಾಗತಿಸಿ, ನಿರೂಪಿಸಿದರು. ಶಂಕರ ಸಾಲ್ಯಾನ್ ವಂದಿಸಿದರು.