ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮಂಜುನಾಥ ಭಂಡಾರಿ ಅವರಿಗೆ ದೀಪಾವಳಿಯ ಶುಭಾಶಯಗಳು.
ಭಂಡಾರಿಗಳೇ,
ಕಳೆದ ಶನಿವಾರ ಮಂಗಳೂರಿನಲ್ಲಿ ನೀವು ನಡೆಸಿದ ಪತ್ರಿಕಾಗೋಷ್ಠಿಯನ್ನು ನೋಡಿದೆ. ಪ್ರಿಯಾಂಕ ಖರ್ಗೆ ಅವರು ಆರ್ ಎಸ್ ಎಸ್ ಚಟುವಟಿಕೆಗಳನ್ನು ನಿರ್ಬಂಧಿಸಬೇಕೆಂದು ಹೇಳಿದ ಒಂದು ವಾರದ ನಂತರವಾದರೂ ಇಂತಹದ್ದೊಂದು ಪತ್ರಿಕಾಗೋಷ್ಠಿ ನಡೆಸಿದ್ದಕ್ಕೆ ಅಭಿನಂದನೆಗಳು.
ಆ ಪತ್ರಿಕಾಗೋಷ್ಠಿಯಲ್ಲಿ ನನ್ನ ಹೆಸರನ್ನು ಪ್ರಸ್ತಾಪಿಸದೆ ನಾನು ಇತ್ತೀಚೆಗೆ ಕೆಲವು ವಿಡಿಯೋಗಳಲ್ಲಿ ಮಾತನಾಡಿರುವ ವಿಷಯದ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದೀರಿ. ಅದನ್ನು ನನ್ನನ್ನು ಉದ್ದೇಶಿಸಿ ಹೇಳಿದ್ದಲ್ಲ ಎಂದು ತಿಳಿಸಿದರೆ ಈ ಪತ್ರವನ್ನು ವಿಷಾದ ವ್ಯಕ್ತಪಡಿಸಿ ಹಿಂದೆಗೆದುಕೊಳ್ಳುತ್ತೇನೆ. ಅದು ನನ್ನನ್ನು ಉದ್ದೇಶಿಸಿ ಹೇಳಿದ್ದರೆ ನೀವು ಪ್ರತಿಕ್ರಿಯಿಸಬೇಕಾಗುತ್ತದೆ.
ಮೊದಲನೆಯ ವಿಷಯ: ನಿಮ್ಮ ಒಡೆತನದ ಸಹ್ಯಾದ್ರಿ ಎಂಜನಿಯರಿಂಗ್ ಕಾಲೇಜಿನಲ್ಲಿ ಯಾವುದೇ ಆರ್ ಎಸ್ ಎಸ್ ಚಟುವಟಿಕೆ ನಡೆದಿಲ್ಲ, ಅಲ್ಲಿ ನಡೆದಿರುವುದು ‘’ಸೃಷ್ಟಿ’’ ಕಾರ್ಯಕ್ರಮ, ಅದು ಎಬಿವಿಪಿ ಕಾರ್ಯಕ್ರಮ ಅಲ್ಲ, ಅದರಲ್ಲಿ ಅವರು ಭಾಗವಹಿಸಿದ್ದಾರೆ ಅಷ್ಟೆ’’ ಎಂದು ಆಯ್ದ ಪೋಟೊಗಳ ಸಹಿತ ಸ್ಪಷ್ಟೀಕರಣ ನೀಡಿದ್ದೀರಿ.
ಭಂಡಾರಿಯವರೇ, ನೀವು ಸುಳ್ಳು ಹೇಳಿದ್ದೀರಿ. ಈ ಪತ್ರದ ಜೊತೆ ಕೆಲವು ಪೋಟೊಗಳನ್ನು ಲಗತ್ತಿಸಿರುವೆ. ಅದನ್ನು ದಯವಿಟ್ಟು ನೋಡಿ. ‘’ಸೃಷ್ಟಿ’’ ಎನ್ನುವುದು ಎಬಿವಿಪಿಯವರೇ ಆಯೋಜಿಸಿರುವ ಕಾರ್ಯಕ್ರಮ. ಸಚಿವ ಪ್ರಿಯಾಂಕ್ ಖರ್ಗೆಯವರು ನಿರ್ಬಂಧಿಸಬೇಕೆಂದು ಹೇಳಿರುವುದು ಇಂತಹದ್ದೇ ಕಾರ್ಯಕ್ರಮಗಳನ್ನು, ಹೆಚ್ಚಿನ ಮಾಹಿತಿಗಾಗಿ ಅವರನ್ನು ಸಂಪರ್ಕಿಸಿ. ನಾನು ಮತ್ತೆ ಈ ಆರೋಪವನ್ನು ಪುನುರಚ್ಚರಿಸುತ್ತೇನೆ, ನಿಮ್ಮ ಮಾನನಷ್ಟ ಮೊಕದ್ದಮೆಯನ್ನು ಸ್ವಾಗತಿಸುತ್ತೇನೆ.
ಎರಡನೆ ವಿಷಯ ಸ್ವಲ್ಪ ವೈಯಕ್ತಿಕವಾದುದು. ಇಲ್ಲಿಯೂ ನನ್ನ ಹೆಸರನ್ನು ಪ್ರಸ್ತಾಪಿಸದೆ ‘’ ಇಂದಿರಾಗಾಂಧಿ, ರಾಜೀವ್ ಗಾಂಧಿ ಮತ್ತು ಸೋನಿಯಾಗಾಂಧಿ ವಿರುದ್ದ ಬರೆದವರಿಗೆ ಕಾಂಗ್ರೆಸ್ ಪಕ್ಷದಿಂದ ವಿಧಾನಪರಿಷತ್ ಗೆ ಟಿಕೆಟ್ ಕೇಳುವ ಯಾವ ನೈತಿಕತೆ ಇದೆ? ಎಂದು ಪ್ರಶ್ನಿಸಿದ್ದೀರಿ.
ನನ್ನ ಪಾಲಿನ 'ಖಳನಾಯಕರು' ಯಾರು ಎಂದು ಹುಡುಕುತ್ತಿದ್ದೆ, ನೀವಾಗಿಯೇ ಕೈ ಎತ್ತಿದ್ದಕ್ಕೆ ಥ್ಯಾಂಕ್ಸ್.
ಆದರೆ ಇದು ಸಾಹಿತ್ಯ, ಮಾಧ್ಯಮ,ಸಂಗೀತ,ಕ್ರೀಡಾ ಕ್ಷೇತ್ರಗಳಲ್ಲಿ ಸಾಧನೆಮಾಡಿದ ಹಿರಿಯರನ್ನು ವಿಧಾನಪರಿಷತ್ ಗೆ ಕಳಿಸುವ ನಾಮನಿರ್ದೇಶನ. ಟಿಕೆಟ್ ತೆಗೆದುಕೊಂಡು ರಾಜಕೀಯ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವ ಚುನಾವಣೆ ಅಲ್ಲ. ಸಂವಿಧಾನದ 172ನೇ ವಿಧಿಯನ್ನು ಒಮ್ಮೆ ಓದಿ.
ಈ ಆರೋಪದಲ್ಲಿ ನೀವು ಕಾಂಗ್ರೆಸ್ ಪಕ್ಷದ ಮೂವರು ನಾಯಕರ ಹೆಸರು ಪ್ರಸ್ತಾಪಿಸಿದ್ದೀರಿ. ಈ ಮೂವರ ಬಗ್ಗೆ ನಾನು ಮಾನಹಾನಿಕರವಾದುದನ್ನು ಬರೆದಿದ್ದರೆ ದಯವಿಟ್ಟು ಇದನ್ನು ಸಾರ್ವಜನಿಕವಾಗಿ ಬಿಡುಗಡೆಗೊಳಿಸಿ, ನಾನೂ ಹುಡುಕುತ್ತಿದ್ದೇನೆ.
ಅದೇ ರೀತಿ ಕಳೆದ ಚುನಾವಣೆಯ ಕಾಲದಲ್ಲಿ ನೀವೇ ಕರೆತಂದು ನಿಮ್ಮ ಪಕ್ಷಕ್ಕೆ ಸೇರಿಸಿ ಚುನಾವಣಾ ಕಣಕ್ಕಿಳಿಸಿದ್ದ ಕಟ್ಟರ್ ಬಿಜೆಪಿ ನಾಯಕರ ಹೇಳಿಕೆಗಳನ್ನೂ ಬಿಡುಗಡೆಗೊಳಿಸಿ.
ಈ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ವಿರುದ್ದ ನಾನೇ ಮಾನನಷ್ಟ ಮೊಕದ್ದಮೆ ಯಾಕೆ ಹೂಡಬಾರದು ಎಂದು ಯೋಚಿಸುತ್ತಿದ್ದೇನೆ.
ಕರಾವಳಿಯ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಮತ್ತು ತತ್ವಬದ್ದ ನಾಯಕರು ಮತ್ತು ಕಾರ್ಯಕರ್ತರ ಪ್ರೀತಿಪೂರ್ವಕ ಒತ್ತಾಯ-ಒತ್ತಡ ಇಲ್ಲದೆ ಇದ್ದಿದ್ದರೆ ಈ ಪತ್ರವನ್ನು ಬರೆಯುತ್ತಿರಲಿಲ್ಲ.
ಪತ್ರಿಕಾಗೋಷ್ಠಿಯಲ್ಲಿ ನಿಮ್ಮ ಅಕ್ಕಪಕ್ಕ ಕೂತವರನ್ನು ಹೊರತುಪಡಿಸಿ ಉಳಿದಂತೆ ಜಿಲ್ಲೆಯ ನಿಮ್ಮ ಪಕ್ಷದ ಹೆಚ್ಚಿನ ನಾಯಕರು ನನ್ನನ್ನು ಅಭಿನಂದಿಸಿರುವುದು ಮಾತ್ರವಲ್ಲ ಇನ್ನಷ್ಟು ಸ್ಫೋಟಕ ಮಾಹಿತಿಗಳನ್ನು ನೀಡಿದ್ದಾರೆ, ನೀವು ಬಯಸಿದರೆ ನಮ್ಮ ಚರ್ಚೆಯನ್ನು ಮುಂದುವರಿಸೋಣ.
ಪ್ರೀತಿಯಿಂದ
ದಿನೇಶ್ ಅಮಿನ್ ಮಟ್ಟು
೨೦-೧೦-೨೦೨೫
( ಈ ಪತ್ರವನ್ನು ಮಂಜುನಾಥ್ ಭಂಡಾರಿಯವರ ಅಧಿಕೃತ ಮೇಲ್ ಐಡಿಗೆ ಕಳಿಸಿದ್ದೇನೆ)
