
ಉಡುಪಿ:ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಜಿ. ಶಂಕರ್ ಸಮಾಜಮುಖಿ ಸೇವೆ ಅನುಕರಣೀಯ : ಯಶ್ ಪಾಲ್ ಸುವರ್ಣ
ಉಡುಪಿ: ಶಿಕ್ಷಣ ಹಾಗೂ ಆರೋಗ್ಯವಂತ ಸಮಾಜದ ಮೂಲಕ ದೇಶದ ಭವಿಷ್ಯ ರೂಪಿಸಲು ಸಾಧ್ಯ ಎಂಬ ಚಿಂತನೆಯ ಮೂಲಕ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಓರ್ವ ಸಹೃದಯಿ ದಾನಿಯಾಗಿ ಮಾಡಿರುವ ಸಮಾಜಮುಖಿ ಸೇವೆಗಳು ಸದಾ ಅನುಕರಣೀಯ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಹೇಳಿದರು.
ಉಡುಪಿ ಅಜ್ಜರಕಾಡು ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವತಿಯಿಂದ ನಾಡೋಜ ಡಾ. ಜಿ. ಶಂಕರ್ ರವರ 70ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಜಿ.ಶಂಕರ್ ರವರು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಮಹಾಪೋಷಕರಾಗಿ ಕಾಲೇಜಿನ ಮೂಲ ಸೌಕರ್ಯ ಅಭಿವೃದ್ದಿಗೆ ಸದಾ ಸಹಕಾರ ನೀಡುತ್ತಾ ಬಂದಿದ್ದು ರಾಜ್ಯದ ವಿವಿಧ ಜಿಲ್ಲೆಗಳ ಸಾವಿರಾರು ವಿದ್ಯಾರ್ಥಿನಿಯರು ಗುಣಮಟ್ಟದ ಶಿಕ್ಷಣವನ್ನು ಪಡೆದು ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ರಕ್ತದಾನ ಶಿಬಿರಗಳ ಮೂಲಕ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಿ ಉಡುಪಿ ಜಿಲ್ಲೆ ರಕ್ತದಾನಿಗಳ ಜಿಲ್ಲೆ ಎಂಬ ಗೌರವಕ್ಕೆ ಪಾತ್ರವಾಗುವಲ್ಲಿ ಜಿ. ಶಂಕರ್ ಅವರ ಕೊಡುಗೆ ಮಹತ್ವದ್ದಾಗಿದೆ ಎಂದರು.
ಅಭಿನಂದನೆ ಸ್ವೀಕರಿಸಿದ ನಾಡೋಜ ಡಾ. ಜಿ.ಶಂಕರ್ ಮಾತನಾಡಿ ಕಾಲೇಜಿನ ವಿದ್ಯಾರ್ಥಿನಿಯರು ಪ್ರತಿವರ್ಷ ಉತ್ತಮ ಸಾಧನೆಯನ್ನು ಮಾಡುವ ಮೂಲಕ ಕಾಲೇಜಿಗೆ ಕೀರ್ತಿ ತರುತ್ತಿದ್ದು, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ಪ್ರಜೆಯಾಗುವ ಸಂಕಲ್ಪ ಮಾಡಬೇಕು. ಕಾಲೇಜಿನ ಮೂಲ ಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವ ಆಶಯ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕೊಡವೂರು, ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಜಯಕರ ಶೆಟ್ಟಿ ಸಭಾಪತಿ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ, ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸೋಜನ್ ಕೆ ಜಿ, ಕ್ಷೇಮ ಪಾಲನಾ ಸಮಿತಿಯ ಸಂಚಾಲಕರದ ಪ್ರೊ ನಿಕೇತನ, ಐ ಕ್ಯು ಎ ಸಿ ಸಂಚಾಲಕರಾದ ಪ್ರೊ ಶ್ರೀಮತಿ ಅಡಿಗ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣ ಭಟ್, ಕಾರ್ಯಕ್ರಮದಲ್ಲಿ ಭಾಗವಹಿಸಿದರು ಡಾ ರಾಜೇಂದ್ರ ಕೆ. ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಡಾ ರಾಮಚಂದ್ರ ಪಾಟ್ಕರ್ ವಂದಿಸಿದರು