
ಉಡುಪಿ: ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಹಿರಿಯ ಸಾಮಾಜಿಕ ಕಾರ್ಯಕರ್ತ ಕೆ. ರಮೇಶ್ ರಾವ್ ಚಿಕಿತ್ಸೆ ಫಲಿಸದೆ ನಿಧನ
ಉಡುಪಿ: ಸಿಂಡಿಕೇಟ್ ಬ್ಯಾಂಕಿನಲ್ಲಿ ಅಧಿಕಾರಿಯಾಗಿ ನಿವೃತ್ತರಾಗಿದ್ದ ರಮೇಶ್ ರಾವ್ (72) ಇಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಕೆಲವು ತಿಂಗಳ ಹಿಂದೆ ಆಂಬುಲೆನ್ಸ್ ವಾಹನ ಅಪಘಾತಕ್ಕೆ ಈಡಾಗಿ ತೀವ್ರ ಗಾಯಗೊಂಡಿದ್ದ ಇವರು ಚಿಕಿತ್ಸೆ ಪಡೆಯುತ್ತಿದ್ದರು. ಪತ್ನಿ, ಮೂವರು ಪುತ್ರರನ್ನು ಅಗಲಿದ್ದಾರೆ. ವೃತ್ತಿಯಲ್ಲಿರುವಾಗಲೂ, ನಿವೃತ್ತರಾದ ಮೇಲೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ರಮೇಶ್ ರಾವ್ ಉಡುಪಿಯ ರಥಬೀದಿ ಗೆಳೆಯರು ಸಂಘಟನೆಯಲ್ಲಿ ಸ್ಥಾಪಕ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಯಕ್ಷಗಾನ ಕಲಾರಂಗದ ಆಜೀವ ಸದಸ್ಯರಾಗಿದ್ದ ಇವರು ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಸಂಸ್ಥೆಯ ವಿದ್ಯಾಪೋಷಕ್ ಮನೆಭೇಟಿಯ ಕಾರ್ಯಕ್ರಮದಲ್ಲಿ ತಮ್ಮ ವಯಸ್ಸು ಮತ್ತು ಅನಾರೋಗ್ಯದ ನಡುವೆಯೂ ಪ್ರತೀವರ್ಷ ಹಲವು ಮನೆಗಳಿಗೆ ಅವರ ಮಗನೊಂದಿಗೆ ಭೇಟಿ ನೀಡಿ ವರದಿಯನ್ನು ಸಲ್ಲಿಸುತ್ತಿದ್ದರು. ಅವರ ಸೇವೆಯನ್ನು ಗೌರವಿಸಿ ಸಂಸ್ಥೆ ಅವರಿಗೆ 2019ರಲ್ಲಿ ಯಕ್ಷಚೇತನ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಇವರ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ ಕೋಟದಲ್ಲಿ ಜರಗಲಿದೆ. ಇವರ ನಿಧನಕ್ಕೆ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.