
ಅಮಾಸೆಬೈಲು: ಯುವತಿಗೆ ಲೈಂಗಿಕ ದೌರ್ಜನ್ಯ ಪ್ರಕರಣ - ಆರೋಪಿ ಶೀಘ್ರ ಬಂಧನಕ್ಕೆ ನಾಗೇಂದ್ರ ಪುತ್ರನ್ ಮನವಿ
ಅಮಾಸೆಬೈಲು: ಯುವತಿಗೆ ಲೈಂಗಿಕ ದೌರ್ಜನ್ಯ ನೀಡಿರುವ ಆರೋಪದಲ್ಲಿ ಬಿಜೆಪಿ ಮುಖಂಡ ನವೀನ್ ಚಂದ್ರ ಶೆಟ್ಟಿ ರಟ್ಟಾಡಿ ವಿರುದ್ಧ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಆದರೆ ಆರೋಪಿ ಬಂಧನ ವಿಳಂಬಕ್ಕೆ ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ಆಕ್ರೋಶ ವ್ಯಕ್ತಪಡಿಸಿದ್ದು ,2 ದಿನದಲ್ಲಿ ಬಂದಿಸದಿದ್ದಲ್ಲಿ ಠಾಣೆ ಎದುರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಧರ್ಮಸ್ಥಳದ ಧರ್ಮ ಸಂರಕ್ಷಣಾ ಯಾತ್ರೆಯ ಸಭೆಯ ಆಮಂತ್ರಣ ಪತ್ರಿಕೆ ನೀಡುವ ಕುರಿತು ಮಹಿಳೆ ಆಮಂತ್ರಣ ಪತ್ರಿಕೆಯನ್ನು ನೀಡಲು ನವೀನ್‌ಚಂದ್ರ ಶೆಟ್ಟಿ ಮನೆಗೆ ಹೋದಾಗ , ಆತ ಮಹಿಳೆಯ ಕೈಯನ್ನು ಸ್ವರ್ಶಿಸಿ ಆಹ್ವಾನ ಪತ್ರಿಕೆ ತೆಗೆದುಕೊಂಡಿದ್ದಾನೆ. ಇದರಿಂದ ಮಹಿಳೆಗೆ ಮುಜುಗರ ಉಂಟಾಗಿತ್ತೆಂದು ದೂರಿನಲ್ಲಿ ತಿಳಿಸಲಾಗಿದೆ.
ನಂತರ ಮಹಿಳೆ ಹೊರಡಲು ಸಿದ್ಧರಾದಾಗ ನವೀನ್‌ಚಂದ್ರ ಶೆಟ್ಟಿ ಎರಡು ನಿಮಿಷ ನಿಲ್ಲುವಂತೆ ಒತ್ತಾಯಿಸಿ, ಮಹಿಳೆ ಕುಳಿತ ಸೋಪಾದ ಪಕ್ಕದಲ್ಲಿ ಬಂದು ಕುಳಿತು, ಮಹಿಳೆಯನ್ನು ಹತ್ತಿರಕ್ಕೆ ಎಳೆದುಕೊಂಡು ಕೆನ್ನೆಗೆ ಮುತ್ತು ಕೊಟ್ಟಿರುವುದಾಗಿ ದೂರಲಾಗಿದೆ. ಇದರಿಂದ ಗಾಬರಿಗೊಂಡ ಮಹಿಳೆ ಅಲ್ಲಿಂದ ತಕ್ಷಣ ಎದ್ದು ಹೊರ ಬರುತ್ತಿರುವಾಗ, ನವೀನ್‌ಚಂದ್ರ ಶೆಟ್ಟಿ, ವಾಪಾಸು ಮನೆಗೆ ಬರುವಂತೆ ಹೇಳುತ್ತಾ ಹಿಂಬಾಲಿಸಿಕೊಂಡು ಬಂದಿರುವುದಾಗಿ ದೂರಲಾಗಿದೆ.
ಯುವತಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ರಾಜಕೀಯ ಪ್ರಭಾವದಿಂದ ಕೇಸ್ ಮಾಡದಂತೆ ಒತ್ತಡವಿದ್ದ ಕಾರಣ ಕೇಸ್ ದಾಖಲಿಸಿರಲಿಲ್ಲ.ಬಳಿಕ ದೂರು ದಾಖಲಾಗಿದ್ದರೂ ಬಂಧಿಸಿಲ್ಲ. ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ಠಾಣೆಗೆ ತೆರಳಿ, ಶೀಘ್ರದಲ್ಲಿ ಆರೋಪಿಯನ್ನು ಬಂಧಿಸಬೇಕು ಎಂದು ಮನವಿ ಮಾಡಿದ್ದಾರೆ. ಇಲ್ಲದಿದ್ದರೆ ಎರಡು ದಿನದಲ್ಲಿ ಠಾಣೆ ಎದುರಿಗೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗೋಪಾಲ, ಜಗನ್ನಾಥ, ರಾಘವೇಂದ್ರ, ಹರೀಶ್, ಕಿಶೋರ್, ಆದಿತ್ಯ, ರಾಜು ಉಪಸ್ಥಿತರಿದ್ದರು.