
ಉಡುಪಿ:ಫಾದರ್' ಸಿದ್ದರಾಮಯ್ಯ ಕರ್ನಾಟಕದ 'ಪೋಪ್" ಆಗಲು ಹೊರಟಿದ್ದಾರೆ - ಸುನಿಲ್ ಕುಮಾರ್ ಲೇವಡಿ
ಉಡುಪಿ: ಜಾತಿಗಣತಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಕರ್ನಾಟಕದ ಪೋಪ್ ಆಗಲು ಹೊರಟಿದ್ದಾರೆ. ಮುಲ್ಲಾ ಆಗಿದ್ದ ಸಿದ್ದರಾಮಯ್ಯ ಈಗ ಫಾದರ್ ಆಗಲು ಹೊರಟಿದ್ದಾರೆ ಎಂದು ಬಿಜೆಪಿ ಶಾಸಕ ಸುನಿಲ್ ಕುಮಾರ್ ಲೇವಡಿ ಮಾಡಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ಸಿಎಂ ಕಚೇರಿ ಕ್ರೈಸ್ತ ಮಿಷನರಿಗಳ ನೆರಳಲ್ಲಿ ಕೆಲಸ ಮಾಡುತ್ತಿದೆ. ಕ್ರಿಶ್ಚಿಯನ್ ಜೊತೆ ಇರುವ 47 ಉಪಜಾತಿ ಪಟ್ಟಿ ಕೈಬಿಡದಿದ್ದರೆ ಆಯೋಗಕ್ಕೆ ಮುತ್ತಿಗೆ ಹಾಕುವ ದಿನ ಬರಬಹುದು ಎಂದು ಎಚ್ಚರಿಸಿದ್ದಾರೆ.
ಸಿಎಂ ಕ್ರಿಶ್ಚಿಯನ್ ಗರ್ಭಗುಡಿಯಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಕರ್ನಾಟಕದ ಪೋಪ್ ಆಗಲು ಹೊರಟಿದ್ದಾರೆ. ಆಗ ಟಿಪ್ಪು ಪೋಷಾಕು, ಈಗ ಪಾದ್ರಿ ರೂಪದ ಆಡಳಿತ. ಸರ್ಕಾರ ಮುಲ್ಲಾ ಪಾದ್ರಿಗಳ ಕೈಗೊಂಬೆ ಆಗಲು ಹೊರಟಿದೆ. ಫಾದರ್ ಸಿದ್ದರಾಮಯ್ಯ ಹಿಂದೆ ಯಾರದೋ ಓಲೈಕೆ ಅಡಗಿದೆ. ರಾಜ್ಯದ ಹಿತ ಅಡಗಿಲ್ಲ, ಸಾಮಾಜಿಕ ನ್ಯಾಯದ ಆಶಯ ಶಿಲುಬೆಗೆ ಏರಿಸಬೇಡಿ. ದಲಿತ ಒಬಿಸಿಯನ್ನು ಮತಾಂತರಕ್ಕೆ ಕೈಹಾಕಿರೋದು ದುರಂತ. ಫಾದರ್ ಸಿದ್ದರಾಮಯ್ಯ ಕುಲ ಶಾಸ್ತ್ರೀಯ ಅಧ್ಯಯನ ಮಾಡಬೇಕು ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು , ಲಿಂಗಾಯತ ಪ್ರತ್ಯೇಕ ಧರ್ಮ ಚರ್ಚೆ ವಿಚಾರದ ಬಗ್ಗೆ ಬಿಜೆಪಿಗೆ ಸ್ಪಷ್ಟವಿದೆ. ಯಾರೂ ಸಮೀಕ್ಷೆ ಬಹಷ್ಕರಿಸಬೇಡಿ. ಧರ್ಮ ಹಿಂದೂ ಅಂತ ಬರೆಸಬೇಕು ಎಂದು ನಮ್ಮ ರಾಜ್ಯಾಧ್ಯಕ್ಷರು ಹೇಳಿದ್ದಾರೆ. ಮಠಾಧೀಶರು ಮತ್ತು ಲಿಂಗಾಯತ ನಾಯಕರ ಮನವೊಲಿಸುತ್ತೇವೆ ಎಂದು ಹೇಳಿದರು.