
ಕುಂದಾಪುರ: ಹನಿಟ್ರ್ಯಾಪ್ ಜಾಲ ಬೇಧಿಸಿದ ಕುಂದಾಪುರ ಪೊಲೀಸರು- ಮಹಿಳೆ ಸಹಿತ 6 ಮಂದಿ ಬಂಧನ
ಕುಂದಾಪುರ: ಹನಿಟ್ರ್ಯಾಪ್ ಜಾಲವೊಂದನ್ನು ಬೇಧಿಸಿದ ಕುಂದಾಪುರ ಪೊಲೀಸರು ಮಹಿಳೆ ಸಹಿತ ಒಟ್ಟು 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ನಾವುಂದ ಬಡಾಕೆರೆಯ ಸವದ್ ಯಾನೆ ಅಚ್ಚು (28), ಗುಲ್ವಾಡಿ ಗಾಂಧೀ ಕಟ್ಟೆಯ ಸೈಪುಲ್ಲಾ(38), ಹಂಗಳೂರು ಗ್ರಾಮದ ಮೊಹಮ್ಮದ್ ನಾಸೀರ್ ಶರೀಫ್(36), ಕುಂಭಾಶಿ ಮೂಡುಗೋಪಾಡಿ ಜನತಾ ಕಾಲೋನಿಯ ಅಬ್ದುಲ್ ಸತ್ತಾರ್(23), ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಾಗೋಡಿಯ ಅಬ್ದುಲ್ ಅಝೀಝ್(26), ಕುಂದಾಪುರ ಎಂ.ಕೋಡಿಯ ಆಸ್ಮಾ(43) ಬಂಧಿತ ಆರೋಪಿಗಳು.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಒಟ್ಟು 18,00,000 ರೂ. ಮೌಲ್ಯದ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಕೋಟೇಶ್ವರ ಗ್ರಾಮದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಆರೋಪಿಗಳು ಆಸ್ಮಾ ಮೂಲಕ ಹನಿಟ್ರ್ಯಾಪ್ ಮಾಡಿ ,ರೂಮ್ ನಲ್ಲಿ ಕೂಡಿ ಹಾಕಿ ವ್ಯಕ್ತಿಗೆ ಹಲ್ಲೆ ನಡೆಸಿ ಆತನಿಂದ ಸಾವಿರಾರು ರೂ.ಹಣ ಲೂಟಿ ಮಾಡಿ ಬೆದರಿಕೆ ಒಡ್ಡಿದ್ದರು.ಪ್ರಕರಣದ ಆರೋಪಿ ಆಸ್ಮಾ ಮತ್ತು ನಾಸಿರ್ ಮೇಲೆ ಈ ಹಿಂದೆ ಇದೇ ರೀತಿಯ ವಂಚನೆ ಪ್ರಕರಣ ದಾಖಲಾಗಿದ್ದಾಗಿ ಎಸ್ಪಿ ತಿಳಿಸಿದ್ದಾರೆ.