
ಮಂಗಳೂರು: ಸುಳ್ಳು ಸುದ್ದಿ ರವಾನಿಸಿದರೆ ಕಠಿನ ಕ್ರಮ: ಎಸ್‌ಪಿ ಎಚ್ಚರಿಕೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ ಜಿಲ್ಲೆಯ ಕೋಮು ಸೌಹಾರ್ದ ಮತ್ತು ಶಾಂತಿ-ಸುವ್ಯವಸ್ಥೆಗೆ ಧಕ್ಕೆ ತರುವಂತಹ ಸುಳ್ಳು ಸುದ್ದಿ/ಸಂದೇಶ/ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ರವಾನಿಸುತ್ತಿರುವುದು ಕಂಡು ಬಂದಿದೆ. ಇದರಲ್ಲಿ ಕೆಲವು ಕಿಡಿಗೇಡಿಗಳು, ವಿದ್ಯಾವಂತರು, ಸಂಘಟಕರು ಸಹ ಪಾಲುದಾರರಾಗಿದ್ದಾರೆ. ಇದು ಜಿಲ್ಲೆಗೆ ಕಪ್ಪು ಚುಕ್ಕೆ ತರುವಂತಹ ವಿದ್ಯಮಾನವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಅಬ್ದುಲ್ ರಹಿಮಾನ್ ಪ್ರಕರಣ ಸೇರಿದಂತೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಹಲವು ಮಂದಿ ಸತ್ಯವನ್ನು ಮರೆ ಮಾಚಿ ಸುಳ್ಳು ಸುದ್ದಿ ಪ್ರಚಾರ ಮಾಡಿ ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಆ ಮೂಲಕ ಜನರನ್ನು ಪ್ರಚೋದನೆಗೊಳ್ಳುವಂತೆ ಮಾಡಿ, ಸಮಾಜ ಘಾತಕ ಕೃತ್ಯಗಳಲ್ಲಿ ತೊಡಗಿ ಜಿಲ್ಲೆಯ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವಂತೆ ಮಾಡುತ್ತಿರುವುದು ಕಂಡು ಬಂದಿದೆ. ಇದರಿಂದ ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಹದಗೆಡುವ ಸಾಧ್ಯತೆಯಿದ್ದು, ಈ ಸಂಬಂಧ ಈಗಾಗಲೇ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ಮುಂದೆಯೂ ಪ್ರಕರಣ ದಾಖಲಿಸಿ ಕಠಿನ ಕ್ರಮ ಕೈಗೊಳ್ಳಲಾಗುವುದು.
ಸಾರ್ವಜನಿಕರು ಸುಳ್ಳು ಸುದ್ದಿ ಅಥವಾ ಪ್ರಚೋದನಕಾರಿ ಸಂದೇಶಗಳನ್ನು ನಂಬಬಾರದು. ಅಂತಹ ಪೋಸ್ಟ್‌ಗಳಿಗೆ ಪ್ರತಿಕ್ರಿಯೆ ನೀಡದೆ ಅಂತಹ ವ್ಯಕ್ತಿಗಳು, ಸಂಘಟನೆಗಳನ್ನು ಅವಗಣಿಸಿದಾಗ ಮಾತ್ರ ಅವುಗಳು ಹರಡುವುದನ್ನು ತಡೆಯಲು ಸಾಧ್ಯವಾಗುತ್ತದೆ. ಆದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಅಥವಾ ಪೋಸ್ಟ್ ಹಂಚುವ ಮುನ್ನ ಅದರ ನೈಜತೆಯನ್ನು ಪರಿಶೀಲಿಸಬೇಕು ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.