
ಬೆಂಗಳೂರು: ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿ ಆರೆಸ್ಸೆಸ್ ಗೀತೆ ಹಾಡಿದ್ದರೆ ಕ್ಷಮೆ ಕೇಳಬೇಕು- ಬಿ.ಕೆ.ಹರಿಪ್ರಸಾದ್
ಬೆಂಗಳೂರು : ಡಿಕೆಶಿಯವರು ಉಪಮುಖ್ಯಮಂತ್ರಿಗಳಾಗಿ ಸಂಘದ ಪ್ರಾರ್ಥನೆ ಮಾಡುವುದರಲ್ಲಿ ನಮ್ಮದೇನು ಅಭ್ಯಂತರ ಇಲ್ಲ. ಆದರೆ, ಕೆಪಿಸಿಸಿ ಅಧ್ಯಕ್ಷರಾಗಿ ಆರೆಸ್ಸೆಸ್ ಗೀತೆ ಹಾಡಿದ್ದರೆ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಆಗ್ರಹಿಸಿದ್ದಾರೆ.
ಹೊಸದಿಲ್ಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರೆಸ್ಸೆಸ್ ಅನ್ನು ಈ ದೇಶದಲ್ಲಿ ಮೂರು ಬಾರಿ ಈಗಾಗಲೇ ನಿಷೇಧ ಮಾಡಲಾಗಿದೆ. ಡಿ.ಕೆ.ಶಿವಕುಮಾರ್ ಅವರು ಉಪಮುಖ್ಯಮಂತ್ರಿಗಳಾಗಿ ಸಂಘದ ಪ್ರಾರ್ಥನೆ ಮಾಡುವುದರಲ್ಲಿ ನಮ್ಮದೇನು ಅಭ್ಯಂತರ ಇಲ್ಲ. ಯಾಕಂದರೆ ಸರಕಾರ ಎನ್ನುವಂತಹದ್ದು ಅದು ಒಂದು ಪಕ್ಷದ ಸರಕಾರ ಅಲ್ಲ, ಅದು ಇಡೀ ಏಳು ಕೋಟಿ ಕರ್ನಾಟಕದ ಜನತೆಯ ಸರಕಾರ. ಅದರಲ್ಲಿ ಆರೆಸ್ಸೆಸ್‌ನವರೂ ಇದ್ದಾರೆ, ಜಮಾತೆ ಇಸ್ಲಾಮಿಯವರೂ ಇದ್ದಾರೆ, ಎಲ್ಲರೂ ಇದ್ದಾರೆ ಎಂದು ಹೇಳಿದರು.
ಆದರೆ ಕಾಂಗ್ರೆಸ್ ಅಧ್ಯಕ್ಷರಾಗಿ ಅವರು ಆರೆಸ್ಸೆಸ್ ಗೀತೆ ಹಾಡುವಂತಿಲ್ಲ. ಕಾಂಗ್ರೆಸ್ ಅಧ್ಯಕ್ಷರಾಗಿ ಅವರು ಹಾಡಿದ್ದರೆ ಕ್ಷಮೆ ಕೇಳಬೇಕಾಗುತ್ತೆ. ಆರೆಸ್ಸೆಸ್ ಮಹಾತ್ಮಾ ಗಾಂಧಿ ಅವರನ್ನು ಕೊಂದಂತಹ ಸಂಘಟನೆ. ಆ ಸಂಘಟನೆಯ ಗೀತೆ ಹಾಡುವುದು ಸರಿಯಲ್ಲ ಎಂದರು.
ಡಿ.ಕೆ.ಶಿವಕುಮಾರ್ ಅವರಿಗೆ ಹಲವು ಮುಖಗಳಿವೆ. ಅವರು ಕೃಷಿಕರು ಎಂದು ಹೇಳಿಕೊಳ್ಳುತ್ತಾರೆ. ಆಮೇಲೆ ಕ್ವಾರಿ ಓನರ್ ಅಂತಾರೆ, ಆಮೇಲೆ ಎಜುಕೇಶನಿಸ್ಟ್ ಎಂದು ಹೇಳುತ್ತಾರೆ, ಬಿಸಿನೆಸ್ ಮ್ಯಾನ್ ಅಂತಾರೆ, ಇಂಡಸ್ಟ್ರಿಯಲಿಸ್ಟ್ ಅಂತಾರೆ, ಅದು ಅವರಿಗೆ ಪ್ಯಾಷನ್ ಇರಬಹುದು. ಯಾರಿಗೆ ಸಂದೇಶ ಕೊಡಬೇಕು ಅನ್ನೋದು ಅವರ ಗಮನದಲ್ಲಿ ಇಟ್ಟುಕೊಂಡಿದ್ದಾರೆ ನಮಗೆ ಗೊತ್ತಿಲ್ಲ. ಸಂಘದ ಪ್ರಾರ್ಥನೆ ಮಾಡಿ ಯಾರನ್ನು ಮೆಚ್ಚಿಸಲು ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ. ಆದರೆ ಉಪಮುಖ್ಯಮಂತ್ರಿಯಾಗಿ ಹಾಡಿದ್ದರೆ ನಮ್ಮದೇನು ಅಭ್ಯಂತರ ಇಲ್ಲ, ಕಾಂಗ್ರೆಸ್ ಅಧ್ಯಕ್ಷರಾಗಿ ಹಾಡಿದ್ದರೆ ಅವರು ಕ್ಷಮೆ ಕೇಳಬೇಕಾಗುತ್ತೆ ಎಂದು ತಿಳಿಸಿದರು.