ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆಯೇ ಏಕೆ ? ಇಲ್ಲಿದೆ ಮಾಹಿತಿ

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆಯೇ ಏಕೆ ? ಇಲ್ಲಿದೆ ಮಾಹಿತಿ

 

ಬೆಂಗಳೂರು : ಮೈಸೂರಿನ ಕೆ.ಆರ್ ನಗರದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ  ನ್ಯಾಯಾಲಯವು ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಜತೆಗೆ ಪ್ರಜ್ವಲ್‌ಗೆ 10 ಲಕ್ಷ ರೂ. ದಂಡವನ್ನೂ ವಿಧಿಸಲಾಗಿದೆ. ಅಲ್ಲದೇ ಸಂತ್ರಸ್ತೆಗೆ 7 ಲಕ್ಷ ರೂ. ಪರಿಹಾರ ನೀಡಲು ಸೂಚಿಸಲಾಗಿದೆ.

ಅತ್ಯಾಚಾರಕ್ಕೆ ಸಂಬಂಧಿಸಿ ಎರಡು ಸೆಕ್ಷನ್‌ ಅಡಿ ತಲಾ ಐದು ಲಕ್ಷ ದಂಡ ವಿಧಿಸಲಾಗಿದೆ. ಐಪಿಸಿ ಸೆಕ್ಷನ್‌ 376(2)(ಕೆ) ಅಂದರೆ ಪ್ರಬಲವಾದ ಸ್ಥಾನದಲ್ಲಿರುವ ವ್ಯಕ್ತಿಯಿಂದ ಅತ್ಯಾಚಾರ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಘೋಷಣೆಯಾಗಿದ್ದು, ಐದು ಲಕ್ಷ ರೂ. ದಂಡ ವಿಧಿಸಲಾಗಿದೆ. ಅದೇ ರೀತಿ ಐಪಿಸಿ ಸೆಕ್ಷನ್‌ 376(2)(ಎನ್‌) ಅಂದರೆ ಪದೇ ಪದೇ ಅತ್ಯಾಚಾರ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಹಾಗೂ ಐದು ಲಕ್ಷ ರೂ. ದಂಡ ವಿಧಿಸಲಾಗಿದೆ. ಹೀಗೆ ಒಟ್ಟು 10 ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ.

ನಿನ್ನೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ  ಎಂದು ತೀರ್ಪು ನೀಡಿತ್ತು. ಇದೀಗ ಶಿಕ್ಷೆ ಪ್ರಕಟವಾಗಿದೆ. ವಿಚಾರಣೆಯ ಬಳಿಕ ಆದೇಶವನ್ನು ಮಧ್ಯಾಹ್ನಕ್ಕೆ ಕಾಯ್ದಿರಿಸಿದ್ದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು, ತೀರ್ಪು ಪ್ರಕಟಿಸಿದ್ದಾರೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಶಿಕ್ಷೆ ಪ್ರಮಾಣದ ಕುರಿತು ಇಂದು ಬೆಳಗ್ಗೆ ವಿಚಾರಣೆ ನಡೆಯಿತು. ಪ್ರಾಸಿಕ್ಯೂಷನ್ ಪರವಾಗಿ ಎಸ್ಪಿಪಿ ಬಿ.ಎನ್ ಜಗದೀಶ್ ವಾದ ಮಾಡಿದರು. ಶಿಕ್ಷೆ ಎಷ್ಟು ಎಂದು ಸ್ಪಷ್ಟವಾಗಿದೆ. ಕೇವಲ ಅತ್ಯಾಚಾರ ಆಗಿದ್ದರೆ 10 ವರ್ಷದಿಂದ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿತ್ತು. ಆದರೆ ಇಲ್ಲಿ ಪದೇ ಪದೆ ಅತ್ಯಾಚಾರವಾಗಿದೆ. ಕನಿಷ್ಠ 10 ವರ್ಷ, ಗರಿಷ್ಠ ಜೀವನ ಪರ್ಯಂತ ಸೆರೆವಾಸದ ಅವಕಾಶ ಇದೆ. ಮಹಿಳೆ ಶಿಕ್ಷಿತಳಲ್ಲ, ಬಡ ಕೂಲಿ ಕೆಲಸದ ಮಹಿಳೆ. ಆಕೆಯ ಮೇಲೆ ಅಧಿಕಾರಯುತ ಸ್ಥಿತಿಯಲ್ಲಿ ಅತ್ಯಾಚಾರ ನಡೆಸಿರುವಂತಹ ಅಪರಾಧ ಸಾಬೀತಾಗಿದೆ. ದುರದೃಷ್ಟವಶಾತ್ ಆಕೆಗೆ ಯಾವುದೇ ಸ್ಥಾನಮಾನವಿಲ್ಲ. ವಿಡಿಯೋ ನೋಡಿದರೆ ಕೃತ್ಯದ ತೀವ್ರತೆ ಸ್ಪಷ್ಟವಾಗಿದೆ. 10 ಸಾವಿರ ಸಂಬಳಕ್ಕೆ ಇವರು ಕೆಲಸ ಮಾಡುತ್ತಿದ್ದರು ಎಂದು ಬಿಎನ್ ಜಗದೀಶ್ ವಾದಿಸಿದರು.

ಮಹಿಳೆಯ ಮೇಲೆ ಪದೇ ಪದೆ ಅತ್ಯಾಚಾರ ಮಾಡಿದ್ದಾರೆ. ಹೀಗಾಗಿ ಮಹಿಳೆ ಕೆಲಸ ಬಿಟ್ಟು ಓಡಿ ಹೋಗುವ ಸ್ಥಿತಿ ನಿರ್ಮಾಣವಾಗಿತ್ತು. ತನ್ನ ಬಟ್ಟೆಗಳನ್ನು ಬಿಟ್ಟು ಮನೆಗೆ ಓಡುವಂತಾಯಿತು. ಅಪರಾಧಿಯ ಕೈಯಲ್ಲಿ ಆಕೆ ಸುಲಭದ ಬಲಿಯಾಗಿದ್ದಳು. ಅತ್ಯಾಚಾರ ದೇಹದ ಮೇಲಲ್ಲ ಮನಸ್ಸಿನ ಮೇಲೂ ಆಗಿದೆ. ವಿಡಿಯೋ ನೋಡಿದ ಬಳಿಕ ಆಕೆ ಆತ್ಮಹತ್ಯೆಗೆ ನಿರ್ಧರಿಸಿದ್ದಳು. ಜೀವಕ್ಕಿಂತ ಹೆಚ್ಚಿನ ಹಾನಿ ಸಂತ್ರಸ್ತ ಮಹಿಳೆಗೆ ಆಗಿದೆ ಎಂದು ಬಿಎನ್ ಜಗದೀಶ್ ವಾದಿಸಿದರು.

ಒಪ್ಪಿಗೆ ಇಲ್ಲದೆ ಲೈಂಗಿಕ ಕ್ರಿಯೆಯ ಚಿತ್ರೀಕರಣ ಮಾಡಲಾಗಿದೆ. ಆಕೆಯನ್ನು ಬ್ಲಾಕ್ ಮೇಲ್ ಮಾಡಿ ಅತ್ಯಾಚಾರ ಮಾಡಲಾಗಿದೆ. ಅತ್ಯಾಚಾರದ ರೀತಿ ಆತನ ವಕ್ರ ಮನಸ್ಥಿತಿ ತೋರಿಸುತ್ತದೆ. ಪ್ರಜ್ವಲ್ ಸಂಸದನಾಗಿದ್ದು ಇಂತಹ ದುಷ್ಕೃತ್ಯ ಎಸಗಿದ್ದಾನೆ. ಕಾನೂನು ತಿಳಿದಿದ್ದರೂ ಕೂಡ ಇಂತಹ ನೀಚ ಕೃತ್ಯ ಎಸಗಿದ್ದಾನೆ. ಈತನ ಮೇಲೆ ಈ ರೀತಿಯ ಇನ್ನಷ್ಟು ಕೇಸ್‌ಗಳಿವೆ. ಬಹಳಷ್ಟು ಜನರ ಅಶ್ಲೀಲ ವಿಡಿಯೋ ಮಾಡಿದ್ದಾನೆ. ವಿಡಿಯೋ ಚಿತ್ರೀಕರಿಸಿದ್ದು ಗಂಭೀರವಾದ ಅಪರಾಧವಾಗಿದೆ. ಪ್ರಜ್ವಲ್‌ಗೆ ಗರಿಷ್ಠ ಶಿಕ್ಷೆ ವಿಧಿಸಿ. ಇದು ಇತರರಿಗೂ ಎಚ್ಚರಿಕೆಯಾಗಬೇಕು ಎಂದರು.

ಸಾಕ್ಷ್ಯಾಧಾರ ನಾಶಪಡಿಸಲು ಯತ್ನಿಸಿರುವುದು ಕೂಡ ಗಂಭೀರ ಅಪರಾಧವಾಗಿದೆ. ತಪ್ಪಿಗೆ ಪಶ್ಚಾತ್ತಾಪ ತೋರಿಲ್ಲ. ಈತನಿಗೆ ಕಠಿಣ ಶಿಕ್ಷೆ ನೀಡಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬೇಕು. ಹಣ ಅಧಿಕಾರ ಇರುವ ಇವರಿಗೆ ಕಡಿಮೆ ಶಿಕ್ಷೆ ಆಗಬಾರದು. ತನಗಿರುವ ಸ್ಥಾನಮಾನವನ್ನು ಈತ ದುರುಪಯೋಗಪಡಿಸಿಕೊಂಡಿದ್ದಾನೆ. ಹಾಗಾಗಿ ಗರಿಷ್ಠ ಶಿಕ್ಷೆ ವಿಧಿಸಬೇಕು ಎಂದು ಎಸ್ಪಿಪಿ ಬಿಎನ್ ಜಗದೀಶ್ ಮನವಿ ಮಾಡಿದರು.

ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಿಸಿ ಜಗದೀಶ್ ವಾದ ಮಂಡಿಸಿದರು. ಕಡಿಮೆ ಶಿಕ್ಷೆ ವಿಧಿಸಿದಾಗ ಸುಪ್ರೀಂ ಕೋರ್ಟ್ ಶಿಕ್ಷೆ ಹೆಚ್ಚಿಸಿದ ಉದಾಹರಣೆಗಳು ಕೂಡ ಇವೆ. ಅಪರಾಧಿಯ ವಕ್ರ ಮನಸ್ಥಿತಿ ಗಮನದಲ್ಲಿ ಇಡಬೇಕು. ಇಂತಹ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಯೇ ವಿಧಿಸಬೇಕು ಎಂದು ಬಿ.ಎನ್ ಜಗದೀಶ್ ತಮ್ಮ ವಾದವನ್ನು ಅಂತ್ಯಗೊಳಿಸಿದರು.

ಪ್ರಾಸಿಕ್ಯೂಷನ್ ಪರ ವಕೀಲ ಅಶೋಕ್ ನಾಯಕ್ ವಾದ ಆರಂಭಿಸಿ, ಸಂಸದರೇ ಇಂತಹ ಕೃತ್ಯ ಮಾಡಿದಾಗ ಗರಿಷ್ಠ ಶಿಕ್ಷೆ ವಿಧಿಸಬೇಕು ಎಂದು ಕೋರ್ಟ್‌ಗೆ ಮನವಿ ಮಾಡಿದರು. ರಾಜಕಾರಣಿಯಾಗಿ ಕಿರಿಯ ವಯಸ್ಸಿನಲ್ಲಿ ಸಂಸದನಾಗಿದ್ದ. ಜನ ಆಯ್ಕೆ ಮಾಡಿದ್ದು ಏಕೆ? ಜನರಿಂದ ಅರಿಸಲ್ಪಟ್ಟ ಈತ ಮಾಡಿದ್ದೇನು? ಹಾಗಾಗಿ ಈತನಿಗೆ ವಿಧಿಸುವ ಶಿಕ್ಷೆ ಸಮಾಜಕ್ಕೆ ಸಂದೇಶವಾಗಬೇಕು. ಪ್ರಜ್ವಲ್ ಬಡವನಲ್ಲ, ಹೆಚ್ಚಿನ ದಂಡ ವಿಧಿಸಿ ಅದರ ದೊಡ್ಡ ಭಾಗ ಸಂತ್ರಸ್ತರಿಗೆ ನೀಡಬೇಕು. ವಿಡಿಯೋ ವೈರಲ್ ಆಗಿ ಆಕೆ ದುಡಿಯಲು ಎಲ್ಲೂ ಹೋಗದಂತೆ ಆಗಿದೆ ಎಂದು ವಾದಿಸಿದರು.

Ads on article

Advertise in articles 1

advertising articles 2

Advertise under the article