ಉಡುಪಿ:ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಎಲ್ಲ ತಾಲೂಕು ಕಚೇರಿ ಮುಂಭಾಗದಲ್ಲಿ ಜನಾಂದೋಲನ

ಉಡುಪಿ:ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಎಲ್ಲ ತಾಲೂಕು ಕಚೇರಿ ಮುಂಭಾಗದಲ್ಲಿ ಜನಾಂದೋಲನ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ತಾಂಡವಾಡುತ್ತಿರುವ ಜಲ್ವಂತ ಸಮಸ್ಯೆಯನ್ನು ಅರಿತುಕೊಂಡು ಪರಿಹರಿಸಬೇಕಾದ ಜಿಲ್ಲೆಯ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾಣೆಯಾಗಿದ್ದಾರೆ‌. ಮುಖ್ಯಮಂತ್ರಿಗಳು ಜಿಲ್ಲಾ ಉಸ್ತುವಾರಿ ಸಚಿವರನ್ನು ಹುಡುಕಿ ತಕ್ಷಣವೇ ಉಡುಪಿಗೆ ಕಳುಹಿಸಿಕೊಟ್ಟು, ಇಲ್ಲಿನ ಸಮಸ್ಯೆಗಳನ್ನು ಪರಿಹರಿಸುವಂತೆ ಮಾಡಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಎಲ್ಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾಲೂಕು ಕಚೇರಿ ಮುಂಭಾಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಕಾಣೆಯಾಗಿರುವ ವಿಚಾರವಾಗಿ ಜನಾಂದೋಲನ ನಡೆಸಲಾಗುವುದು ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಉಡುಪಿ ಜಿಲ್ಲಾಧ್ಯಕ್ಷ ವಿಜಯ ಕೊಡವೂರು ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಬಂದಾಗಿನಿಂದ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ 248 ಕೋಟಿ ರೂ. ನಷ್ಟ ಉಂಟಾಗಿದ್ದು, ಇದುವರೆಗೂ ಒಂದು ರೂ. ಕೂಡ ಪರಿಹಾರದ ಹಣ ಬಿಡುಗಡೆಯಾಗಿಲ್ಲ. ಪರ್ಯಾಯ ಮಹೋತ್ಸವಕ್ಕೆ ಅನುದಾನ ಬರುತ್ತಿಲ್ಲ‌‌. ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಅನುದಾನ ಬರುತ್ತಿಲ್ಲ. ಕಡಲ್ಕೊರತೆ ಉಂಟಾಗುವ ಪ್ರದೇಶದಲ್ಲಿ ತಡೆಗೋಡೆ ನಿರ್ಮಾಣ ಮಾಡಲು ಅನುದಾನ ಬಂದಿಲ್ಲ. ಉಸ್ತುವಾರಿ ಸಚಿವರು ಜಿಲ್ಲೆಯ ಮಗಳಂತೆ ಕೆಲಸ ಮಾಡಬೇಕಿತ್ತು. ಆದರೆ ಅವರು ಜಿಲ್ಲೆಯ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ದೂರಿದರು. 

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಐರೋಡಿ ವಿಠಲ ಪೂಜಾರಿ ಮಾತನಾಡಿ, ಗ್ರಾಪಂ ಮಟ್ಟದಲ್ಲಿ 2 ಸಾವಿರ ರೂ. ಒಳಗೆ ಆಗುತ್ತಿದ್ದ ಏಕ ವಿನ್ಯಾಸ ನಕ್ಷೆ (9/11) ಅನ್ನು ಇಂದಿನ ರಾಜ್ಯ ಕಾಂಗ್ರೆಸ್ ಸರಕಾರವು ನಗರಾಭಿವೃದ್ಧಿ ಪ್ರಾಧಿಕಾರದ ಅಡಿಗೆ ತಂದು ಜನರನ್ನು ಸಂಕಷ್ಟಕ್ಕೆ ತಳ್ಳಿದೆ. ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 11ಸಾವಿರ ಫೇಲ್ ಗಳು ಬಾಕಿ ಇವೆ. ಇದರಿಂದ ಬಡವರಿಗೆ ಮನೆಕಟ್ಟಲು ಆಗುತ್ತಿಲ್ಲ. ಕಟ್ಟಡ ನಿರ್ಮಾಣ ಕೆಲಸವನ್ನು ನಂಬಿಕೊಂಡು ಬದುಕುತ್ತಿರುವ ಕಾರ್ಮಿಕರು ಕೂಡ ಬೀದಿಗೆ ಬಿದ್ದಿದ್ದಾರೆ ಎಂದು ಕಿಡಿಕಾರಿದರು.

ಜಿಲ್ಲೆಯ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬಾಗಿನ ತೆಗೆದುಕೊಳ್ಳಲು ಮಾತ್ರ ಉಡುಪಿಗೆ ಬರುತ್ತಾರೆ. ಆದರೆ ಜನರ ಯಾವುದೇ ಸಮಸ್ಯೆಯನ್ನು ಆಲಿಸುತ್ತಿಲ್ಲ. ಜನರ ಕಷ್ಟ ಪರಿಹಾರ ಮಾಡಬೇಕೆಂಬ ಯಾವುದೇ ಯೋಚನೆ ಕೂಡ ಅವರಲ್ಲಿ ಕಂಡು ಬರುತ್ತಿಲ್ಲ ಎಂದು ಗುಡುಗಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಆದರ್ಶ ನಾಯರಿ, ಸುಶಾಂತ್ ಬ್ರಹ್ಮಾವರ, ಸುರೇಂದ್ರ ಕುಲಾಲ್ ಇದ್ದರು.

Ads on article

Advertise in articles 1

advertising articles 2

Advertise under the article