ಮೈಸೂರು: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಸೂಕ್ತವಾಗಿದೆ- ಸಿದ್ದರಾಮಯ್ಯ

ಮೈಸೂರು: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಸೂಕ್ತವಾಗಿದೆ- ಸಿದ್ದರಾಮಯ್ಯ

 


ಮೈಸೂರು: ಈ ಬಾರಿಯ ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟಕರಾಗಿ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಆಯ್ಕೆ ಕುರಿತು ಪ್ರತಿಪಕ್ಷ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಅದರಲ್ಲೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಬಾನು ಮುಷ್ತಾಕ್ ಗೋಮಾಂಸ ತಿಂತಾರೆ. ದಸರಾದಲ್ಲಿ ಗೋ ಪೂಜೆ ನಂದಿ ಪೂಜೆ ಹೇಗೆ ಮಾಡ್ತಾರೆ? ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಾನು ಮುಷ್ತಾಕ್ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಕುಂಟು ನೆಪ ಹುಡುಕುತ್ತಿದ್ದಾರೆ. ಇದು ನಾಡ ಹಬ್ಬ. ಇದನ್ನು ಉದ್ಘಾಟನೆ ಮಾಡಲು ಆ ಧರ್ಮ, ಈ ಧರ್ಮ ಎಂಬುವುದಿಲ್ಲ. ದನದ ಮಾಂಸ ತಿಂದು ಬಂದು ದಸರಾ ಉದ್ಘಾಟಿಸಿ ಬಿಡುತ್ತಾರೇನೋ? ಎಂಬಂತಹ ಹೇಳಿಕೆಗಳನ್ನು ಡೋಂಗಿಗಳಷ್ಟೇ ನೀಡಲು ಸಾಧ್ಯ. ಅಂತಹವರ ಮಾತಿಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಅವರ ಹೇಳಿಕೆಗೆ ತಿರುಗೇಟು ನೀಡಿದರು.

ಬೂಕರ್‌ ಪ್ರಶಸ್ತಿ ವಿಜೇತರು ನಮಲ್ಲಿ ಬಹಳ ಕಡಿಮೆ. ಬಹುಶಃ ಬಾನುಮುಷ್ತಾಕ್‌ ಎರಡನೇಯವರು. ಧರ್ಮಾಂಧರಿಗೆ ಇತಿಹಾಸ ಗೊತ್ತಿಲ್ಲ. ಅಂತಹವರು ಮಾತ್ರ ಟೀಕೆ ಮಾಡುತ್ತಾರೆ. ಮೊದಲು ಅವರು ಇತಿಹಾಸ ತಿಳಿದುಕೊಳ್ಳಲಿ. ಬಿಜೆಪಿಯವರು ರಾಜಕೀಯವಾಗಿ ಟೀಕೆ ಮಾಡುತ್ತಿದ್ದಾರೆ. ಎಂದಿಗೂ ಜಾತ್ಯತೀತವಾಗಿ ಮಾತನಾಡುವುದಿಲ್ಲ ಎಂದರು.

ಬಾನುಮುಷ್ತಾಕ್‌ ಅವರಿಗೆ ಕನ್ನಡಾಂಬೆಯ ಬಗ್ಗೆ ಗೌರವವಿದೆ. ಹೃದಯ ಹಣತೆ ಕೃತಿಯನ್ನು ಕನ್ನಡ ಭಾಷೆಯಲ್ಲೇ ಬರೆದಿದ್ದಾರೆ. ಭಾಷೆಯ ಬಗ್ಗೆ ಅಭಿಮಾನ, ಪ್ರೀತಿ, ಗೌರವ ಇಲ್ಲದೇ ಇದ್ದರೆ, ಕನ್ನಡದಲ್ಲಿ ಬರೆಯುತ್ತಿದ್ದರೇ? ಅವರ ಎಲ್ಲಾ ಸಾಹಿತ್ಯವೂ ಕನ್ನಡದಲ್ಲೇ ರಚನೆಯಾಗಿವೆ. ಬಾನುಮುಷ್ತಾಕ್‌ ಅವರ ಪುಸ್ತಕವನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ ದೀಪಾ ಬಸ್ತಿ ಅವರಿಗೂ ರಾಜ್ಯ ಸರ್ಕಾರ ಗೌರವ ಸಲ್ಲಿಸಿದೆ. ಸನ್ಮಾನ ಮಾಡಿ, 10 ಲಕ್ಷ ರೂ. ನೀಡಲಾಗಿದೆ. ಬಾನು ಮುಷ್ತಾಕ್‌ರಂತೆಯೇ ದೀಪಾ ಬಸ್ತಿ ಅವರನ್ನೂ ಸರ್ಕಾರ ಗೌರವಿಸಿದೆ ಎಂದು ಹೇಳಿದರು.

ದಸರಾ ಆಚರಣೆಯ ಉನ್ನತ ಅಧಿಕಾರ ಸಮಿತಿ ಉದ್ಘಾಟಕರನ್ನು ಆಯ್ಕೆ ಮಾಡಲು ನನಗೆ ಅವಕಾಶ ನೀಡಿತ್ತು. ಈ ಹಿಂದೆಯೂ ಮುಸ್ಲಿಂ ಸಮುದಾಯದ ಕವಿ ನಿಸಾರ್‌ ಅಹಮದ್‌ ಅವರಿಂದ ದಸರಾ ಉದ್ಘಾಟನೆ ಮಾಡಿಸಲಾಗಿತ್ತು. ಈ ಬಾರಿ ಬೂಕರ್‌ ಪ್ರಶಸ್ತಿ ವಿಜೇತರಾದ ಬಾನುಮುಷ್ತಾಕ್‌ರನ್ನು ಆಹ್ವಾನಿಸಲು ತಾವು ನಿರ್ಧಾರ ತೆಗೆದುಕೊಂಡಿದ್ದು ಸರಿಯಾಗಿದೆ ಎಂದರು.

Ads on article

Advertise in articles 1

advertising articles 2

Advertise under the article