
ಉಡುಪಿ:ಕರಾವಳಿ ಜಿಲ್ಲೆಯ ಮಳೆ ಹಾನಿಗೆ ವಿಶೇಷ ಪರಿಹಾರ ಮಂಜೂರು ಮಾಡುವಂತೆ ಕರಾವಳಿ ಭಾಗದ ಶಾಸಕರಿಂದ ಮುಖ್ಯಮಂತ್ರಿಗೆ ಮನವಿ
ಉಡುಪಿ: ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಭಾರೀ ಮಳೆ ಹಾಗೂ ಪ್ರಾಕೃತಿಕ ವಿಕೋಪದಿಂದ ವ್ಯಾಪಕ ಹಾನಿಯಾಗಿರುವ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗೆ ವಿಶೇಷ ಅನುದಾನ ಮಂಜೂರು ಮಾಡುವಂತೆ ಕರಾವಳಿ ಜಿಲ್ಲೆಗಳ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಮಾಡಿದರು.
ಪ್ರಾಕೃತಿಕ ವಿಕೋಪದಿಂದ ನೂರಾರು ಮರಗಳು ಬಿದ್ದು, ವಿದ್ಯುತ್ ಕಂಬಗಳಿಗೆ, ಮನೆಗಳಿಗೆ ಹಾನಿಯಾಗಿದ್ದು, ರಸ್ತೆ, ಮೋರಿ, ಶಾಲಾ ಕಟ್ಟಡಗಳು, ಕಾಲುಸಂಕಗಳು ಹಾಗೂ ಸೇತುವೆಗಳು ಹಾನಿಗೊಳಗಾಗಿವೆ.
ಕಳೆದ ಎರಡು ವರ್ಷಗಳಿಂದ ಪ್ರಾಕೃತಿಕ ವಿಕೋಪದಡಿ ಅನುದಾನ ಬಿಡುಗಡೆಯಾಗದೆ ಗ್ರಾಮೀಣ ರಸ್ತೆಗಳ ಸಮರ್ಪಕ ನಿರ್ವಹಣೆಯಿಲ್ಲದೆ ಸಂಚಾರ ದುಸ್ತರವಾಗಿದೆ. ಸಮುದ್ರ ತೀರದಲ್ಲಿ ಕಡಲು ಕೊರೆತದ ಸಮಸ್ಯೆ ಹಲವೆಡೆ ಕಾಣಿಸಿಕೊಂಡಿದೆ.
ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗುತ್ತಿದ್ದು, ಮೇ ಮತ್ತು ಜೂನ್ ತಿಂಗಳುಗಳಲ್ಲಿ ದೇಶದಲ್ಲಿಯೇ ಅತ್ಯಧಿಕವಾಗಿ ದಾಖಲೆಯ ಮಳೆ ದಾಖಲಾಗಿದೆ.ಬಹುತೇಕ ರಸ್ತೆಗಳು ಹೊಂಡಗಳಿಂದ ಕೂಡಿದ್ದು, ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟಾಗಿರುತ್ತದೆ.
ರಸ್ತೆಗಳ ನಿರ್ವಹಣೆ ಹಾಗೂ ದುರಸ್ತಿಗೆ ಸಾಕಷ್ಟು ಅನುದಾನದ ಅಗತ್ಯವಿದ್ದು, ಈ ಬಗ್ಗೆ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ (ಉಡುಪಿ ಮತ್ತು ಮಂಗಳೂರು) ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ತಲಾ ರೂ. 50 ಕೋಟಿ ವಿಶೇಷ ಅನುದಾನವನ್ನು ಪ್ರಾಕೃತಿಕ ವಿಕೋಪದಡಿ ಮಂಜೂರು ಮಾಡುವಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರ ಪರವಾಗಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.