ಉಡುಪಿ: ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಉಡುಪಿ ಆಶ್ರಯದಲ್ಲಿ ಗುರುಪೂರ್ಣಿಮಾ ದಿನಾಚರಣೆ

ಉಡುಪಿ: ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಉಡುಪಿ ಆಶ್ರಯದಲ್ಲಿ ಗುರುಪೂರ್ಣಿಮಾ ದಿನಾಚರಣೆ

 

ಉಡುಪಿ:ಮನುಷ್ಯತ್ವ, ಮೋಕ್ಷತ್ವ ಮತ್ತು ಸಜ್ಜನರ ಸಂಗ ಮಾಡುವುದರಿಂದ ಜೀವನದ ಧ್ಯೇಯ ಗುರಿಯನ್ನು ತಲುಪಲು ಸಾಧ್ಯವಿದೆ ಎಂದು ಮಂಗಳೂರು ಶ್ರೀ ಮಾತಾ ಅಮೃತಾನಂದಮಯಿ ಮಠದ ಮಠಾಧಿಪತಿಗಳಾದ ಸ್ವಾಮಿನಿ ಮಂಗಳಾಮೃತ ಪ್ರಾಣ ಹೇಳಿದರು.

ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಉಡುಪಿ ಇದರ ಆಶ್ರಯದಲ್ಲಿ ಗುರುಪೂರ್ಣಿಮಾ ದಿನಾಚರಣೆಯ ಅಂಗವಾಗಿ ಮಲ್ಪೆ ಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ "ಮಹಾ ಮೃತ್ಯುಂಜಯ ಹೋಮ" ಹಾಗೂ ಗುರುಪಾದುಕಾ ಪೂಜೆಯಲ್ಲಿ‌ ಭಾಗವಹಿಸಿ ಅವರು ಸಂದೇಶ ನೀಡಿದರು. ಸನಾತನ ಧರ್ಮದಲ್ಲಿ ಮೋಕ್ಷವೇ ಮನುಷ್ಯ ಜೀವನದ ಮುಖ್ಯ ಗುರಿ. ಮೋಕ್ಷವನ್ನು ಜೀವನದ ಗುರಿಯಾಗಿ ಇಟ್ಟುಕೊಂಡು ಧರ್ಮದ ಹಾದಿಯಲ್ಲಿ ಆಸೆ, ಬಯಕೆಗಳನ್ನು ಪೊರೈಸಿಕೊಂಡು ಸಂಪತ್ತು ಗಳಿಸಬೇಕು ಎಂದರು.


ಬೆಳಿಗ್ಗೆ ಸಂಜೆ ಒಂದು ಸಲ ದೇವರ ಪ್ರಾರ್ಥನೆ ಮಾಡಿದರೆ ಸಾಕಾಗುವುದಿಲ್ಲ. ಅಲ್ಲದೆ, ಕೇವಲ ಹಬ್ಬ ಹರಿದಿನಗಳಲ್ಲಿ ದೇವರ ಆಚರಣೆ ಮಾಡುವುದರಿಂದ ದೇವರು ಹಾಗೂ ನಮ್ಮ ಸಂಬಂಧ ಗಟ್ಟಿಗೊಳ್ಳುವುದಿಲ್ಲ. ದೇವರು ಹೇಳಿದ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಾವು ಮುಂದುವರಿಯಬೇಕು. ಗುರುಗಳಿಗೆ ನಮ್ಮ ಜೀವನವನ್ನು ಸಮರ್ಪಿಸಿದ ಮೇಲೆ ಅವರು ನೀಡಿದ ಸಂದೇಶಗಳನ್ನು ನಾವು ಪಾಲನೆ ಮಾಡಬೇಕು. ಅಲ್ಲದೆ, ನಮ್ಮ ಜೀವನ ಪದ್ದತಿ, ಆಲೋಚನೆಗಳಲ್ಲಿ‌ ಏನು ಬದಲಾವಣೆ ಆಗಿದೆ ಎಂಬುವುದನ್ನು ಅವಲೋಕಿಸಬೇಕು ಎಂದರು.


ಸಮಿತಿಯ ಸೇವಾ ಕಾರ್ಯಕರ್ತೆ ಪ್ರಮೋದಾ ಮಾತನಾಡಿ, ಅಜ್ಞಾನ ಎಂಬ ಅಂಧಕಾರವನ್ನು ನೀಗಿಸಿ ಸುಜ್ಞಾನವನ್ನು ನೀಡುವ ದಿನವೇ ಈ ಗುರುಪೂರ್ಣಿಮೆ. ಅದೇ ಅದರ ಮಹತ್ವ. ನಾವು ಉಡುಪಿ ಸಮಿತಿಯವರು ಸೇರಿಕೊಂಡು ಮಾತಾ ಅಮೃತಾನಂದಮಯಿ ದೇವಿ‌ಯ ಕಿರುಕಾಣಿಕೆಯಾಗಿ ಈ ಗುರುಪೂರ್ಣಿಮೆ ದಿನಾಚರಣೆ ಆಚರಣೆ ಮಾಡಿದ್ದೇವೆ. ಸಾರ್ವಜನಿಕರ ಸಹಕಾರದೊಂದಿಗೆ ಮೃತ್ಯುಂಜಯ ಹೋಮವನ್ನು‌ ಕೂಡ ಹಮ್ಮಿಕೊಂಡಿದ್ದೇವೆ. ಆಧ್ಯಾತ್ಮ ನಮ್ಮ ಜೀವನದಲ್ಲಿ ಎದುರಾಗುವ ಸಂಘರ್ಷಗಳನ್ನು ಎದುರಿಸಲು ರಕ್ಷಣೆ ನೀಡುತ್ತದೆ. ಕೆಟ್ಟ ಕರ್ಮಗಳೆಲ್ಲ ನೀಗಿ, ಜೀವನದಲ್ಲಿ ಒಳ್ಳೆಯತನ ಬೆಳೆಯುತ್ತದೆ ಎಂದರು. 

ಸೇವಾ ಸಮಿತಿಯ ಕಾರ್ಯಕರ್ತ ಭಾಸ್ಕರ್ ಮಾತನಾಡಿ, ಭಾರತದಲ್ಲಿ ಗುರುಪೂರ್ಣಿಮೆಗೆ ಮಹತ್ತರವಾದ ಸ್ಥಾನವಿದೆ. ಗುರು ಅಂದರೆ ಅಜ್ಞಾನ ದೂರ ಮಾಡಿ ಜ್ಞಾನ ಕೊಡುವ ಮಹಾಶಕ್ತಿ. ಅವರಿಗೆ ಕೃತಜ್ಞತೆಯನ್ನು ಸಲ್ಲಿಸುವುದು ನಮ್ಮ ಕರ್ತವ್ಯ ಎಂದರು. ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಉಡುಪಿ ಇದರ ಅಧ್ಯಕ್ಷ ಯೋಗೀಶ್ ಬೈಂದೂರು, ಸದಸ್ಯರಾದ ನವೀನ, ಭವಾನಿಶಂಕರ, ಭಾಸ್ಕರ್ ಉದ್ಯಾವರ, ಡಾ. ವೀಣಾ, ದಯಾನಂದ ಕಡೆಕಾರ್, ಆನಂದ ಮೊದಲಾದವರು ಭಾಗವಹಿಸಿದ್ದರು‌. ಮೃತ್ಯುಂಜಯ ಹೋಮದಲ್ಲಿ ನೂರಾರು ಸೇವಾ ಕಾರ್ಯಕರ್ತರು ಭಾಗವಹಿಸಿದ್ದರು.

Ads on article

Advertise in articles 1

advertising articles 2

Advertise under the article