
ಉಡುಪಿ:ಅ.11ರಿಂದ 17ರವರೆಗೆ ಅಂಬಾಗಿಲಿನ ಅಮೃತ್ ಗಾರ್ಡನ್ ನಲ್ಲಿ ಆರೋಗ್ಯ ಸಪ್ತಾಹ ಕಾರ್ಯಕ್ರಮ
ಉಡುಪಿ: ಲಯನ್ಸ್ ಕ್ಲಬ್ ಉಡುಪಿ ಅಮೃತ್, ರೋಟರಿ ಕ್ಲಬ್ ಕಲ್ಯಾಣಪುರ, ಉಡುಪಿ ಜಿಲ್ಲಾ ಆಸ್ಪತ್ರೆ, ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಮತ್ತು ಮುನಿಯಾಲು ಆಯುರ್ವೇದಿಕ್ ಆಸ್ಪತ್ರೆಗಳ ಸಂಯುಕ್ತ ಆಶ್ರಯದಲ್ಲಿ ಆರೋಗ್ಯ ಸಪ್ತಾಹ ಕಾರ್ಯಕ್ರಮವನ್ನು ಉಡುಪಿ ಅಂಬಾಗಿಲಿನ ಅಮೃತ್ ಗಾರ್ಡನ್ ನಲ್ಲಿ ಆಗಸ್ಟ್ 11ರಿಂದ 17ರವರೆಗೆ ಹಮ್ಮಿಕೊಳ್ಳಲಾಗಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾರ್ಯಕ್ರಮದ ಸಂಯೋಜಕ ವಿನಯಕುಮಾರ್ ಕಬ್ಯಾಡಿ, ಆ. 11ರಂದು ಮಧುಮೇಹ ಮತ್ತು ರಕ್ತದೊತ್ತಡ, 12ರಂದು ಕಣ್ಣಿನ ಪರೀಕ್ಷೆ, ಕಿವಿ ಮೂಗು ಗಂಟಲು ಮತ್ತು ಶ್ರವಣ ಪರೀಕ್ಷೆ, 13 ರಂದು ಗರ್ಭಕೋಶ ಕ್ಯಾನ್ಸರ್ ಸ್ತನ ಕ್ಯಾನ್ಸರ್ ಮತ್ತು ದಂತ ಪರೀಕ್ಷೆ, 14ರಂದು ಚರ್ಮರೋಗ ಮತ್ತು ಎಲುಬು, ಆಯುಷ್ ವೈದ್ಯಕೀಯ ಪರೀಕ್ಷೆ, 15ರಂದು ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರ ಮತ್ತು ರಕ್ತ ಮಾದರಿ ಪರೀಕ್ಷೆ, 16ರಂದು ಮುನಿಯಾಲು ಆಯುರ್ವೇದಿಕ್ ಸಂಸ್ಥೆಯಿಂದ ವೈದ್ಯಕೀಯ ತಪಾಸಣೆ, 17ರಂದು ಯೋಗಾ ಶಿಬಿರ ನಡೆಯಲಿದೆ ಎಂದರು.
ಈ ಶಿಬಿರಗಳು ಅಂಬಾಗಿಲು ಅಮೃತ್ ಗಾರ್ಡನ್ ನಲ್ಲಿ ಪ್ರತಿದಿನ 9:30 ರಿಂದ ಮಧ್ಯಾಹ್ನ 1.30 ರವರೆಗೆ ಜರಗಲಿದೆ. ಆರೋಗ್ಯ ಸಪ್ತಾಹ ಕಾರ್ಯಕ್ರಮವನ್ನು ಆಗಸ್ಟ್ 11ರಂದು ಬೆಳಿಗ್ಗೆ 9ಗಂಟೆಗೆ ರೋಟರಿ ಕ್ಲಬ್ ಐಪಿಡಿಜಿ ದೇವಾನಂದ ಉದ್ಘಾಟಿಸಲಿರುವರು ಎಂದು ಅವರು ತಿಳಿಸಿದರು
ಸುದ್ದಿಗೋಷ್ಠಿಯಲ್ಲಿ ರೋಟರಿ ಕ್ಲಬ್ ಕಲ್ಯಾಣಪುರ ಅಧ್ಯಕ್ಷ ಶಶಿಕಾಂತ್ ನಾಯಕ್, ಅಮೃತ್ ಗಾರ್ಡನ್ ಮ್ಯಾನೇಜರ್ ಹರೀಶ್ ಎಂ.ಯು., ಲಯನ್ಸ್ ಕ್ಲಬ್ ಉಡುಪಿ ಅಮೃತ್ ನ ಅಧ್ಯಕ್ಷ ಗೋಪಾಲ್ ಅಂಚನ್, ಕಾರ್ಯದರ್ಶಿ ಜಯಪ್ರಕಾಶ್ ಭಂಡಾರಿ ಉಪಸ್ಥಿತರಿದ್ದರು.