
ಉಡುಪಿ: ಹೆಣ್ಣುಮಕ್ಕಳನ್ನು ಮತಾಂತರ ಮಾಡಲು ಕರೆ ನೀಡುವ ಯತ್ನಾಳ್ ವಿರುದ್ಧ ಯುಎಪಿಎ ಪ್ರಯೋಗ ಯಾಕಿಲ್ಲ? ರಾಜ್ಯ ಸರ್ಕಾರದ ಮೃದು ಧೋರಣೆ ವಿರುದ್ಧ ವಿಮ್ ಆಕ್ರೋಶ
ಉಡುಪಿ: ಇತ್ತೀಚಿಗೆ ಕೊಪ್ಪಳದಲ್ಲಿ ಕ್ಷುಲ್ಲಕ ಪ್ರೀತಿ ಪ್ರೇಮದ ವಿಚಾರಕ್ಕೆ ನಡೆದ ಕೊಲೆಯನ್ನು ಮುಂದಿಟ್ಟುಕೊಂಡು ಕೋಮುವಾದಿ, ದ್ವೇಷ ಮನಸ್ಥಿತಿ ಹೊಂದಿರುವ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ತೀವ್ರ ನೀಚ, ದ್ವೇಷಪೂರಿತ ಹೇಳಿಕೆ ನೀಡಿ ಹೆಣ್ಣುಮಕ್ಕಳನ್ನು ವ್ಯವಸ್ಥಿತವಾಗಿ ಪ್ರೀತಿಯ ಮೂಲಕ ಮತಾಂತರ ಮಾಡಲು ಕರೆ ಕೊಟ್ಟು, ತಾನು ಆ ಕಾರ್ಯಕ್ಕೆ ಆರ್ಥಿಕ ನೆರುವು ನೀಡುವುದಾಗಿ ಘೋಷಿಸಿದ್ದು ಸಂವಿಧಾನ ವಿರೋಧಿ ಹಾಗೂ ಮಹಿಳಾ ವಿರೋಧಿ ಹೇಳಿಕೆಯಾಗಿದೆ.ದ್ವೇಷ ಹರಡುವಿಕೆ , ಪ್ರಚೋದನಾತ್ಮಕ ಹೇಳಿಕೆಗಳನ್ನೇ ಕಸುಬಾಗಿಸಿಕೊಂಡಿರುವ ಯತ್ನಾಳ್ ಸೌಹಾರ್ದ ಸಮಾಜಕ್ಕೆ ಮಾರಕವಾಗಿದ್ದಾರೆ. ಹೇಳಿಕೆ ನೀಡಿ ಮೂರು ದಿನ ಕಳೆದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಯತ್ನಾಳ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಜಾತ್ಯಾತೀತ ಸರ್ಕಾರದ ಇಬ್ಬಂದಿತನಕ್ಕೆ ಸಾಕ್ಷಿಯಾಗಿದೆ. ಯಾವುದೇ ಪುರಾವೆಗಳಿಲ್ಲದೆ ಭಯೋತ್ಪಾದನೆ, ಮತಾಂತರದ ಸುಳ್ಳಾರೋಪದ ಮೇಲೆ UAPA ಪ್ರಕರಣಗಳನ್ನು ದಾಖಲಿಸಿ ಅಮಾಯಕರನ್ನು ಜೈಲಿಗಟ್ಟುವ ಸರ್ಕಾರ ಬಹಿರಂಗವಾಗಿ ದ್ವೇಷ ಕಾರುವ ಯತ್ನಾಳ್ ವಿರುದ್ಧ ಯಾಕೆ UAPA ಅಡಿಯಲ್ಲಿ ಪ್ರಕರಣ ದಾಖಲಿಸಿ ಜೈಲಿಗಟ್ಟುತ್ತಿಲ್ಲ? ಪ್ರಚೋದನೆಗೆ ಒಳಗಾಗಿ ಅಥವಾ ಆಮಿಷಕ್ಕೆ ಒಳಗಾಗಿ ಹಿಂದೂ ಯುವಕರು ಇವರ ಅಸಂಬದ್ಧ ಹೇಳಿಕೆಗಳನ್ನು ಅನುಸರಿಸಿದ್ದೇ ಆದಲ್ಲಿ ರಾಜ್ಯ ಸರ್ಕಾರ ಇದರ ಹೊಣೆಯನ್ನು ಹೊರಲು ತಯಾರಿದೆಯೇ ? ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ ಪ್ರಶ್ನಿಸಿದರು.
ಯಾವ ಆಧಾರವೂ ಇಲ್ಲದೆ ಲವ್ ಜಿಹಾದ್ ಎಂಬ ಹೆಸರನ್ನು ಇಟ್ಟುಕೊಂಡು ಪ್ರೇಮ ಪ್ರಕರಣಗಳನ್ನು ಧರ್ಮಾಧಾರಿತವಾಗಿ ಗುರುತಿಸಿ ಗಲಭೆಯೆಬ್ಬಿಸುವ ಯತ್ನಾಳ್ ನಂತಹ ಕೋಮು ಕ್ರಿಮಿಗಳು ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಕೇಸರಿ ಲವ್ ಟ್ರಾಪ್ ಗಳ ಬಗ್ಗೆ ಯಾಕೆ ತುಟಿ ಬಿಚ್ಚುತ್ತಿಲ್ಲ? ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿರಿಸಿ ನಡೆಯುವ ಇದು ವ್ಯವಸ್ಥಿತ ಷಡ್ಯಂತ್ರವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.