
ಉಡುಪಿ: ರಾಜ್ಯದಲ್ಲಿ ವರ್ಷಕ್ಕೆ 2 ಸಾವಿರ ಸರಕಾರಿ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿವೆ- ಸಂಸದ ಕೋಟ ಆತಂಕ
ಉಡುಪಿ : ರಾಜ್ಯದಲ್ಲಿ ವರ್ಷಕ್ಕೆ 2000 ಸಾವಿರ ಸರಕಾರಿ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿದೆ ಅನ್ನೋದು ಬೇಸರದ ಸಂಗತಿ. ಅನುದಾನಿತ ಶಾಲೆಗಳು ಮಲತಾಯಿ ಧೋರಣೆಗೆ ಸಿಲುಕಿರುವ ಬಡ ಮಕ್ಕಳ ಶಾಲೆ. ನಮ್ಮೂರಿಗೆ ಶಿಕ್ಷಣ ನೀಡುವ ಉದ್ಧೇಶಕ್ಕೆ ಅನುದಾನಿತ ಶಾಲೆಗಳು ಪ್ರಾರಂಭವಾಗಿದೆ. 48000 ಸರಕಾರ ಶಾಲೆಗಳ ಜೊತೆ 2400 ಅನುದಾನಿತ ಶಾಲೆಗಳನ್ನು ಸರಕಾರವೇ ನಡೆಸಲಿ ಎನ್ನುವುದು ನಮ್ಮ ಬಹುಕಾಲದ ಬೇಡಿಕೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಉಡುಪಿ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಆಯೋಜಿಸಲಾದ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ.) ಬೆಂಗಳೂರು, ಇವರ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಅನುದಾನಿತ ಶಾಲಾ ಸಂಘ ಇವರ ಸಹಕಾರದೊಂದಿಗೆ ಉಡುಪಿ ಜಿಲ್ಲೆಯ 200 ಅನುದಾನಿತ ಶಾಲೆಗಳ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ 20 ಸಾವಿರ ಜೊತೆ ಉಚಿತ ಶಾಲಾ ಸಮವಸ್ತ್ರಗಳ ವಿತರಣೆ ಹಾಗೂ ಹೆಗ್ಗುಂಜೆ ರಾಜೀವ ಶೆಟ್ಟಿ ವಿದ್ಯಾಪೋಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ನಾವು ಜನಪ್ರತಿನಿಧಿಗಳು ಸರಕಾರದ ಅನುದಾನ ಕಾರ್ಯಕ್ರಮ, ಯೋಜನೆಗಳನ್ನು ಉದ್ಘಾಟನೆ ಮಾಡುವವರು.ಆದರೆ ಯಾವ ಅಪೇಕ್ಷೆ ಇಲ್ಲದೇ ಮಕ್ಕಳಿಗೆ ಗುಣಮಟ್ಟದ ಉಚಿತ ಸಮವಸ್ತ್ರ ನೀಡುವ ಡಾ.ಎಚ್.ಎಸ್.ಶೆಟ್ಟಿ ಅವರು ರಾಜ್ಯಕ್ಕೆ ಮಾದರಿ ಎಂದರು.
ಕಾರ್ಯಕ್ರಮದಲ್ಲಿ ಹೆಗ್ಗುಂಜೆ ರಾಜೀವ್ ಶೆಟ್ಟಿ ಟ್ರಸ್ಟ್ ಪ್ರವರ್ತಕ ಡಾ.ಎಚ್.ಎಸ್. ಶೆಟ್ಟಿ ಪ್ರಸ್ತಾವನೆ ಮಾತುಗಳನ್ನಾಡಿ, ಸುಮಾರು 17 ವರ್ಷದ ಹಿಂದೆ 500 ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡುವ ಮೂಲಕ ಆರಂಭವಾದ ಈ ಕಾರ್ಯ ಇಂದಿಗೂ ಮುಂದುವರಿದೆ. ಉತ್ತಮ ಕಾರ್ಯ ಮಾಡುವಾಗ ಸರಕಾರ ಸಹಕಾರ ನೀಡುತ್ತಿಲ್ಲಾ ಎನ್ನುವ ಬೇಸರವಿದೆ. ಉತ್ತಮ ಕಾರ್ಯಕ್ರಮಗಳಿಗೆ ಸರಕಾರ ಬೆನ್ನೆಲುಬಾಗಬೇಕು ಆದರೆ ಸರಕಾರ ಅಸಡ್ಡೆ ಬೇಸರ ತರಿಸಿದೆ. ಹೀಗಾಗಿ ಈ ಬಾರಿ ಅನುದಾನಿತ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡುವ ಕಾರ್ಯಕ್ರಮ ಆಯೋಜಿಸಿದ್ದೇವೆ. ಕುಗ್ರಾಮಗಳಲ್ಲಿ ಇರುವ ಅನುದಾನಿತ ಶಾಲೆಗಳು ಮಾತ್ರ ಕನ್ನಡ ಕಲಿಯುವ ಏಕೈಕ ಮಾಧ್ಯಮ. ಈ ಶಾಲೆಗಳನ್ನು ಸರಕಾರ ಕೈ ಹಿಡಿದು ಮೇಲೆತ್ತಬೇಕಾದ ಅಗತ್ಯತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ನಿವೃತ್ತ ಶಿಕ್ಷಕಿ ಇಂದಿರಾ ಹಾಲಂಬಿ ಅವರಿಗೆ ಹೆಗ್ಗುಂಜೆ ರಾಜೀವ ಶೆಟ್ಟಿ ವಿದ್ಯಾಪೋಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ಸಂದರ್ಭ ಅನುದಾನಿತ ಶಾಲೆಯ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ 20000 ಜೊತೆ ಸಮವಸ್ತ್ರ ವಿತರಿಸಲಾಯಿತು. ಇತ್ತೀಚೆಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಸ್ವೀಕರಿಸಿದ ಡಾ.ಎಚ್ ಎಸ್ ಶೆಟ್ಟಿ ಅವರನ್ನು ಕಲಾರಂಗದವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಹಾಲಾಡಿ ರಾಜೀವ ಶೆಟ್ಟಿ ಸರಕಾರ ಶಾಲೆಯ ವಿದ್ಯಾರ್ಥಿ ಶ್ರೀರಾಮ್, ಸಾಧನೆಗೆ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೊಡಗು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೋ. ಅಶೋಕ್ ಎಸ್ ಆಲೂರು ಶುಭಾಶಂಸನೆಗೈದರು. ವೇದಿಕೆಯಲ್ಲಿ ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ಮುರಳಿ ಕಡೆಕಾರ್, ಉಡುಪಿ ಜಿಲ್ಲಾ ಅನುದಾನಿತ ಪ್ರೌಢಶಾಲೆಗಳ ನೌಕರರ ಸಂಘ ಅಧ್ಯಕ್ಷ ಡಾ.ಜಯಶೀಲ ಶೆಟ್ಟಿ, ಜಿಲ್ಲಾ ಅನುಧಾನಿತಾ ಪ್ರಾಥಮಿಕ ಶಾಲಾ ಸಂಘದ ಅಧ್ಯಕ್ಷ ಕೆ.ಅರುಣ್ ಕುಮಾರ್ ಶೆಟ್ಟಿ, ಹೆಗ್ಗುಂಜೆ ರಾಜೀವ್ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ನಾಗರಾಜ್ ಶೆಟ್ಟಿ ಉಪಸ್ಥಿತರಿದ್ದರು.