
ಉಡುಪಿ - ಮಣಿಪಾಲದಲ್ಲಿ ಹೊಟೇಲ್, ಅಂಗಡಿಗಳು ರಾತ್ರಿ 11 ಗಂಟೆಯವರೆಗೆ ತೆರೆದಿಡಲು ಅವಕಾಶ
ಉಡುಪಿ: ಆರ್ಥಿಕತೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಉಡುಪಿ ಹಾಗೂ ಮಣಿಪಾಲದಲ್ಲಿ ಹೊಟೇಲ್, ಅಂಗಡಿಗಳು ರಾತ್ರಿ 11 ಗಂಟೆಯವರೆಗೆ ತೆರೆದಿಡಲು ಅವಕಾಶ ಕಲ್ಪಿಸುವ ಕುರಿತು ಶುಕ್ರವಾರ ನಡೆದ ಉಡುಪಿ ನಗರಸಭೆಯ ಸಾಮಾನ್ಯಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.
ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಯಶ್‌ಪಾಲ್ ಸುವರ್ಣ, ಕಾನೂನು ಸುವ್ಯವಸ್ಥೆಯ ನೆಪವೊಡ್ಡಿ ಪ್ರಸ್ತುತ ಉಡುಪಿ, ಮಣಿಪಾಲದಲ್ಲಿ ರಾತ್ರಿ 10ಗಂಟೆಗೆ ಅಂಗಡಿ, ಹೊಟೇಲ್‌ಗಳನ್ನು ಬಂದ್ ಮಾಡಲಾಗುತ್ತಿದೆ. ಇದರಿಂದ ಜಿಲ್ಲೆಯ ಆರ್ಥಿಕತೆಗೆ ಪೆಟ್ಟು ಬೀಳುತ್ತಿದೆ. ಅದೇ ರೀತಿ ಪ್ರವಾಸಿಗರು, ರೋಗಿಯ ಸಂಬಂಧಿಕರು, ವಿದಾರ್ಥಿಗಳಿಗೆ ರಾತ್ರಿ ಊಟ ಹಾಗೂ ವಸ್ತುಗಳನ್ನು ಕೊಂಡುಕೊಳ್ಳಲು ತುಂಬಾ ತೊಂದರೆ ಆಗುತ್ತಿದೆ ಎಂದರು.
ಆದುದರಿಂದ ಜಿಲ್ಲೆಯ ಆರ್ಥಿಕ ಹಿತದೃಷ್ಠಿಯಿಂದ ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗುವ ರೀತಿಯಲ್ಲಿ ಉಡುಪಿ ಹಾಗೂ ಮಣಿಪಾಲದಲ್ಲಿ ರಾತ್ರಿ 11 ಗಂಟೆಯವರೆಗೆ ಅಂಗಡಿ, ಹೊಟೇಲ್‌ಗಳನ್ನು ತೆರೆದಿಡುವಂತೆ ನಿರ್ಣಯ ಮಾಡಬೇಕು ಎಂದು ಶಾಸಕರು ಸಭೆಗೆ ತಿಳಿಸಿದರು. ಅದಕ್ಕೆ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದರು.ನಗರಸಭೆಗೆ ಸಂಬಂಧಿಸಿದ ಅಂಗಡಿ ಕೋಣೆಗಳನ್ನು ಕಳೆದ 9 ತಿಂಗಳುಗಳಿಂದ ಹರಾಜು ಹಾಕಿಲ್ಲ, ಅಧಿಕಾರಿಗಳ ನಿರ್ಲಕ್ಷ್ಯದಿಂದ ನಗರಸಭೆಯ ಆದಾಯಕ್ಕೆ ತೊಂದರೆ ಆಗುತ್ತಿದೆ ಎಂದು ಸದಸ್ಯ ಬಿ.ಜಿ.ಹೆಗ್ಡೆ ಆರೋಪಿಸಿದರು.
ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಉಡುಪಿ ನಗರ, ಮಲ್ಪೆ, ಸಂತೆಕಟ್ಟೆ ಹಾಗೂ ಗೋಪಾಲಪುರದಲ್ಲಿರುವ ಸುಮಾರು 15 ಅಂಗಡಿ ಕೋಣೆಗಳನ್ನು ಜಿಲ್ಲಾಧಿಕಾರಿ ಮಂಜೂರಾತಿ ನೀಡಿದಂತೆ ಹರಾಜು ಹಾಕಲಾಗಿದೆ. ಆದರೆ ಬಾಡಿಗೆ ಕರಾರು ನೋಂದಾಣಿ ಮತ್ತು ಡಿಸಿ ಇ ಖಾತೆಗೆ ಅನುಮೋದನೆ ನೀಡಬೇಕಾಗಿದೆ. ಈ ಹಿಂದಿನ ಜಿಲ್ಲಾಧಿಕಾರಿಗಳು ವರ್ಗಾವಣೆಯಾಗಿರುವುದರಿಂದ ಈ ಕಾರ್ಯ ವಿಳಂಬವಾಗಿದೆ. ಈ ವಾರದೊಳಗೆ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದರು.