
ಮಂಗಳೂರು : ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವೃದ್ಧೆಗೆ ಸೈಬರ್ ವಂಚಕರಿಂದ 3.9 ಕೋ.ರೂ. ವಂಚನೆ !
ಮಂಗಳೂರು: ನಿವೃತ್ತ ಜೀವನ ನಡೆಸುತ್ತಿದ್ದ ಲೆನಿ ಪ್ರಭು ಎಂಬ ವೃದ್ಧೆಗೆ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಅಪರಿಚಿತರು 3.9 ಕೋಟಿ ರೂ. ವಂಚಿಸಿರುವ ಕುರಿತು ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲೆನಿ ಅವರಿಗೆ ಜ.15ರಂದು ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು. ಸ್ವಲ್ಪ ಹೊತ್ತಿನ ಬಳಿಕ ಪ್ರಭು ಅವರು ಆ ನಂಬರ್‌ಗೆ ಕರೆ ಮಾಡಿದ್ದರು. ಮಹಿಳೆಯೊಬ್ಬಳು ಕರೆ ಸ್ವೀಕರಿಸಿ, ತಾನು ಜನರಲ್ ಅಂಚೆ ಕಚೇರಿಯಿಂದ ಮಾತನಾಡುತ್ತಿದ್ದೇನೆ. ನೀವು ಚೀನಕ್ಕೆ ಕಳುಹಿಸಿದ ಪಾರ್ಸಲ್ ಮರಳಿ ಬಂದಿದೆ. ಅದರಲ್ಲಿ 150 ಗ್ರಾಂ
ಎಂಡಿಎಂಎ ಇದೆ. ಈ ಪ್ರಕರಣದಲ್ಲಿ 75 ವರ್ಷಕ್ಕಿಂತ ಹೆಚ್ಚು ಜೈಲು ಶಿಕ್ಷೆ ಇದೆ ಎಂದಳು. ತಾನು ಯಾವುದೇ ಪಾರ್ಸಲ್ ಕಳುಹಿಸಿಲ್ಲ ಎಂದು ವೃದ್ಧೆ ಹೇಳಿದರೂ ನೀವೇ ಕಳುಹಿಸಿರುವ ದಾಖಲೆಯಾಗಿ ನಿಮ್ಮ ಐಡಿ ಕಾರ್ಡ್ ಹಾಗೂ ಹೆಸರು ಇದೆ ಎಂದು ಉತ್ತರಿಸಿದಳು. ಬಳಿಕ ನಾವು ನಿಮಗೆ ಸಹಾಯ ಮಾಡುತ್ತೇವೆ ಎಂದು ಹೇಳಿ, ವೈಯಕ್ತಿಕ ವಿವರವನ್ನು ಪಡೆದುಕೊಂಡಳು. ನಿಮಗೆ 'ನಿರಾಕ್ಷೇಪಣ ಪತ್ರ' ಸಿಗಬೇಕಾದರೆ ನಿಮ್ಮ ಸಂಬಳದ ಶೇ. 93 ರಷ್ಟು ದುಡ್ಡು ಕಳುಹಿಸಬೇಕು ಎಂದು ಹೇಳಿದ್ದಲ್ಲದೆ ಈ ವಿಚಾರವನ್ನು ಯಾರಿಗೂ ತಿಳಿಸಬಾರದು ಎಂದು ಭಯ ಹುಟ್ಟಿಸಿದಳು. ಅದರಂತೆ ಜ. 17ರಂದು 55 ಲಕ್ಷ ರೂ.ಗಳನ್ನು ಆರ್‌ಟಿಜಿಎಸ್ ಮೂಲಕ ಆಕೆ ತಿಳಿಸಿದ ಖಾತೆಗೆ ವರ್ಗಾವಣೆ ಮಾಡಿದರು.
ಆ ಬಳಿಕ ಆಕೆ ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಜು. 4ರ ವರೆಗೆ ಒಟ್ಟು 3,09,75,000 ರೂ. ಆರ್‌ಟಿಜಿಎಸ್ ಮೂಲಕ ವರ್ಗಾವಣೆ ಮಾಡಿದರು. ಅನಂತರದ ದಿನಗಳಲ್ಲಿ ಆಕೆಯಿಂದ ಯಾವುದೇ ಪ್ರತಿಕ್ರಿಯೆ ದೊರೆಯದಿದ್ದಾಗ ಮೋಸ ಹೋಗಿರುವುದು ಅರಿವಾಗಿದೆ. ಯಾರೋ ಅಪರಿಚಿತ ವ್ಯಕ್ತಿಗಳು ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಆನ್‌ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ವಂಚನೆ ಮಾಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆಗ್ರಹಿಸಿದ್ದಾರೆ.