ಉಡುಪಿ: ಡಾ.ವಿರೂಪಾಕ್ಷ ದೇವರಮನೆ ಅವರ "ಓ ಮನಸೇ ತುಸು ನಿಧಾನಿಸು" ಪುಸ್ತಕ ಬಿಡುಗಡೆ

ಉಡುಪಿ: ಡಾ.ವಿರೂಪಾಕ್ಷ ದೇವರಮನೆ ಅವರ "ಓ ಮನಸೇ ತುಸು ನಿಧಾನಿಸು" ಪುಸ್ತಕ ಬಿಡುಗಡೆ

 


ಆಧುನಿಕ ಬದುಕಿನ ಓಟದಲ್ಲಿ ನಾವು ನಿಧಾನಿಸಬೇಕಿದೆ. 

ನಿಧಾನವಾಗಿ ಸಾಗುತ್ತಿದ್ದ ದಿನಗಳಲ್ಲಿ ಪ್ರಪಂಚದ ಕಣ್ಣಿಗೆ ನಾವು ಹಿಂದೆ ಬೀಳುತ್ತೇವೆ ಎನ್ನುವ ಆತಂಕ.

ಅದಕ್ಕೆ ಸರಿಯಾಗಿ ನಾವೂ ಓಟದ ಬದುಕಿನ ಕನಸು ಕಾಣತೊಡಗುತ್ತೇವೆ. 

ಸಂತಸ ಪಡುತ್ತೇವೆ.  ಇಂದಲ್ಲ ನಾಳೆ ನಮ್ಮ ಕನಸು ನನಸಾಗುತ್ತದೆ ಎಂದು ಹಿರಿ ಹಿರಿ ಹಿಗ್ಗುತ್ತೇವೆ. 

ಓಡಿ ಓಡಿ ಸುಸ್ತಾಗುತ್ತೇವೆ. ಎಲ್ಲಿಂದ ಆರಂಭಿಸಿದ್ದೆವೋ ಅಲ್ಲಿಂದ ಬಹುದೂರ ನಡೆದು ಬಿಟ್ಟಿರುತ್ತೇವೆ, ತಿರುಗಿ ನೋಡಿದಾಗ ನಮ್ಮ ಬದುಕಿನ ಅತಿ ಸಂತೋಷದ , ನೆಮ್ಮದಿಯ ಕ್ಷಣಗಳನ್ನು ನಾವು ಹೊರಟಲ್ಲಿಯೇ ಬಿಟ್ಟು ಬಂದಿರುತ್ತೇವೆ. ಅದನ್ನು ಮನಸ್ಸು ಒಪ್ಪಿಕೊಳ್ಳದೇ ಈಗಿರುವುದೇ ಚೆನ್ನಾಗಿದೆ ಎಂದು ನಂಬಿಸಲು ಯತ್ನಿಸುತ್ತದೆ. ಅಲ್ಲಿ ಬಿಟ್ಟು ಬಂದರೇನಾಯ್ತು, ಇಲ್ಲಿ ಬೆಳಕಿದೆ ಇಲ್ಲೇ ಹುಡುಕೋಣ ಎಂದು ಕತ್ತಲಲ್ಲಿ ಕಳೆದು ಕೊಂಡದ್ದನ್ನು ಬೆಳಕಿನಲ್ಲಿ ಹುಡುಕ ಹೊರಡುತ್ತೇವೆ. ಬದುಕಿಗೆ ಅರ್ಥ ನೀಡಬೇಕಿದ್ದ ಸ್ನೇಹ ಸಂಬಂಧ ಗಳನ್ನು ಉಪೇಕ್ಷೆ ಮಾಡಿ ಬಿಟ್ಟಿರುತ್ತೇವೆ. ಹೃದಯಕ್ಕೆ ಸಂತಸ ನೀಡುತ್ತಿದ್ದ ಹಾಡು, ಕವನ, ನೃತ್ಯ, ನಾಟಕ, ಗಾಳಿಪಟ, ನದೀತೀರ, ಬೆಟ್ಟದ ಮೇಲಿನ ಗುಡಿ, ಟ್ರೆಕಿಂಗ್ ಗಳಿಗೆ ಸಮಯವಿಲ್ಲ ಎಂದು ನಿರ್ಧರಿಸಿ ಬಿಟ್ಟಿರುತ್ತೇವೆ.ಹೆಚ್ಚಿನ ಡಿಗ್ರಿ ಗಳನ್ನು ಗೊತ್ತಿರದ ಊರಿನಲ್ಲಿ ಗಳಿಸಿ, ನಮಗೆ ಅಗತ್ಯಕ್ಕಿಂತ ಹೆಚ್ಚಿನ ಗಳಿಕೆ ಮಾಡುತ್ತಾ ಬದುಕನ್ನು ಕಳೆದು ಬಿಡುತ್ತೇವೆ. ನಮಗೆ ಏನು ಬೇಕು  ನಮ್ಮ ಸಂತಸ ಯಾವುದರಲ್ಲಿದೆ ಎಂದು ತಿಳಿಯದೇ ಗಾಣದ ಎತ್ತಿನಂತಾಗಬಾರದಲ್ವೇ ಬದುಕು. ಜೇಬಲ್ಲಿ ದುಡ್ಡಿಲ್ಲ ಎಂದ ದಿನಗಳಲ್ಲಿ ಪುಟ್ ಪಾತ್ ಮೇಲಿನ ಸೆಕೆಂಡ್ ಹ್ಯಾಂಡ್ ಪುಸ್ತಕಗಳನ್ನು ಕೊಂಡು ಓದಿ ಸಂತಸವಾಗಿದ್ದ ದಿನಗಳನ್ನು ಮರೆಯುತ್ತೇವೆ. ಕ್ಷಣದಲ್ಲಿ ಸಾವಿರ ಪುಸ್ತಕಗಳನ್ನು ಕೊಳ್ಳುವುದು ಸಾಧ್ಯವಾದಾಗ ಓದಲು ಸಮಯವಿಲ್ಲ ಎನ್ನುತ್ತೇವೆ. ಬದುಕಿಗೊಂದು ಕೆಲಸ ಸಿಕ್ಕರೆ ಸಾಕು ಎಂದು ಆರಂಭಿಸಿ ಕೆಲಸವನ್ನೇ ಬದುಕು ಮಾಡಿಕೊಂಡು ಬಿಟ್ಟಿರುತ್ತೇವೆ. ಜೀವನ ರೂಪಿಸಲು ಸಮಯ ಮಾಡಿಕೊಳ್ಳುವುದಕ್ಕಿಂತ ಜೀವನೋಪಾಯ ಹೆಚ್ಚು ಪ್ರಾಮುಖ್ಯತೆ ಪಡೆಯಬಾರದಲ್ವೇ. ವೃತ್ತಿಯಲ್ಲಿ ಸಂತೃಪ್ತಿ, ಸಂಬಂಧಗಳಲ್ಲಿ ಸಂತೋಷ, ಹವ್ಯಾಸಗಳಿಗೆ ಮರುಜೀವ, ದೇಹಕ್ಕೆ ಆರೋಗ್ಯ ಆತ್ಮಕ್ಕೆ ತೃಪ್ತಿ ಬದುಕಿಗೆ ಅರ್ಥ ಸಿಗಲು ತುಸು ನಿಧಾನಿಸಬೇಕಿದೆ. ಅರ್ಥವಿದ್ದ ಬದುಕು ವ್ಯರ್ಥವಾಗದು. ಇಲ್ಲದಿದ್ದರೆ ಖಾಲಿತನ ಕಾಡುತ್ತದೆ. ವ್ಯಸನಗಳು ಅಂಟಿಕೊಳ್ಳುತ್ತವೆ. ಹಾಗಾಗದಿರಲಿ. ನೀವು ಅದ್ಭುತ ವ್ಯಕ್ತಿ . ಸಹೃದಯಿ. ನಿಮ್ಮ ಮನೆಯವರಿಗೆ, ಸ್ನೇಹಿತರಿಗೆ ನೀವು ಆಪತ್ಭಾಂದವ. ಎಲ್ಲರ ಕಾಳಜಿ ಮಾಡುವ ನೀವು ನಿಮ್ಮ ಕಾಳಜಿ ಮಾಡುವ ಅಗತ್ಯವಿದೆ. ನಿಮ್ಮನ್ನು ನೀವು ಗೌರವಿಸುವುದು ನಿಮ್ಮನ್ನು ನೀವು ಪ್ರೀತಿಸುವುದು ಮುಖ್ಯ. ಓಮನಸೇತುಸುನಿಧಾನಿಸು- 


ವಿರೂಪಾಕ್ಷ ದೇವರಮನೆ

Ads on article

Advertise in articles 1

advertising articles 2

Advertise under the article