
ಪಾಟ್ನಾ: ಐಸಿಯು ಒಳಗೆ ನುಗ್ಗಿ ಕೊಲೆ ಪ್ರಕರಣದ ಆರೋಪಿ ಚಂದನ್ ಮಿಶ್ರಾನನ್ನು ಕೊಲೆಗೈದ ದುಷ್ಕರ್ಮಿಗಳು !
17/07/2025 01:22 PM
ಪಾಟ್ನಾ: ಬಿಹಾರದ ರಾಜಧಾನಿ ಪಾಟ್ನಾದ ಖಾಸಗಿ ಆಸ್ಪತ್ರೆಯೊಂದರ ಐಸಿಯುನೊಳಕ್ಕೆ ನುಗ್ಗಿದ ಐವರು ಹಂತಕರು, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿ ಅಲ್ಲಿಂದ ಪರಾರಿಯಾಗಿರುವ ಘಟನೆ ಜು. 17ರಂದು ನಡೆದಿದೆ. ಹಾಡಹಗಲೇ ಇಂಥ ಕೃತ್ಯವೊಂದು ನಡೆದಿರುವುದು ಇಡೀ ಬಿಹಾರ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಸತ್ತವನ ಹೆಸರು ಚಂದನ್ ಮಿಶ್ರಾ. ಕೊಲೆ ಪ್ರಕರಣವೊಂದರಲ್ಲಿ ಆತನಿಗೆ ಶಿಕ್ಷೆಯಾಗಿತ್ತು. ಅನೇಕ ದಿನಗಳಿಂದ ಜೈಲಿನಲ್ಲಿದ್ದ ಆತನ ಮೆಡಿಕಲ್ ಪೆರೋಲ್ ಮೇಲೆ ಪಾಟ್ನಾದ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ. ಆತನನ್ನು ಐಸಿಯುನಲ್ಲಿ ಇರಿಸಲಾಗಿತ್ತು.
ಆಸ್ಪತ್ರೆಗೆ ಬಂದ ಐವರು ಪಿಸ್ತೂಲುಧಾರಿಗಳು, ಐಸಿಯು ಕೊಠಡಿಯ ಬಾಗಿಲು ತೆಗೆದುಕೊಂಡು ಒಳಕ್ಕೆ ಹೋಗಿ ಅಲ್ಲಿ ಚಂದನ್ ಮಿಶ್ರಾ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ನಂತರ ಅಲ್ಲಿಂದ ಪರಾರಿಯಾಗಿದ್ದಾರೆ. ಐಸಿಯು ಹೊರಗಿನ ಸಿಸಿಟಿವಿ ದೃಶ್ಯಗಳಲ್ಲಿ ಈ ದೃಶ್ಯ ದಾಖಲಾಗಿದೆ.