ಉಡುಪಿ: ಪರಶುರಾಮ ಮೂರ್ತಿ ಬಗ್ಗೆ ಅಪಪ್ರಚಾರ- ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮತ್ತು ತಂಡ ಜನತೆಯ ಕ್ಷಮೆ ಯಾಚಿಸಲಿ : ಸಂಧ್ಯಾ ರಮೇಶ್

ಉಡುಪಿ: ಪರಶುರಾಮ ಮೂರ್ತಿ ಬಗ್ಗೆ ಅಪಪ್ರಚಾರ- ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮತ್ತು ತಂಡ ಜನತೆಯ ಕ್ಷಮೆ ಯಾಚಿಸಲಿ : ಸಂಧ್ಯಾ ರಮೇಶ್

 

ಉಡುಪಿ: ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಅವರ ಕನಸಿನ ಕೂಸು ಪರಶುರಾಮ ಥೀಮ್ ಪಾರ್ಕ್ ಯೋಜನೆಯ ವಿರುದ್ಧ ನಿರಂತರ ಅಪಪ್ರಚಾರದಲ್ಲಿ ತೊಡಗಿರುವ ಕಾರ್ಕಳ ಕಾಂಗ್ರೆಸ್ ಗೆ ಪೊಲೀಸ್ ಇಲಾಖೆಯ ತನಿಖೆಯ ಫಲಿತಾಂಶದಿಂದ ತೀವ್ರ ಮುಖಭಂಗವಾಗಿದೆ. ಕಾಂಗ್ರೆಸ್ ನ ಅಪಪ್ರಚಾರವೆಲ್ಲವೂ ಸುಳ್ಳಾಗಿದೆ. ಫೈಬರ್ ಫೈಬರ್ ಎಂದು ಗೋಗರೆಯುತ್ತಾ ಕಳೆದ ಎರಡೂವರೆ ವರ್ಷದಿಂದ ಪ್ರವಾಸೋದ್ಯಮವನ್ನು ಹಾಳುಗೆಡಹಿರುವ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ಮತ್ತು ಅವರ ತಂಡ ಜಿಲ್ಲೆಯ ಜನತೆಯ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್ ಅಗ್ರಹಿಸಿದ್ದಾರೆ.

ಶಾಸಕ ವಿ.ಸುನಿಲ್ ಕುಮಾರ್ ಅವರ ವಿಶೇಷ ಪ್ರಯತ್ನದಿಂದ ಕಾರ್ಕಳದ ಉಮಿಕಲ್ ಬೆಟ್ಟದ ಮೇಲೆ ಪ್ರತಿಷ್ಠಾಪಿಸಿದ್ದ ಪರಶುರಾಮ ಮೂರ್ತಿ ಫೈಬರ್ ನಿಂದ ಮಾಡಿಲ್ಲ ಎಂಬ ಸತ್ಯ ಪೊಲೀಸ್ ತನಿಖೆಯಿಂದ ಬಯಲಾಗಿರುವುದು ಕಾಂಗ್ರೆಸ್ ನ ಅಪಪ್ರಚಾರಕ್ಕಾಗಿರುವ ದೊಡ್ಡ ಸೋಲಾಗಿದೆ. ಆದರೂ 'ಜಟ್ಟಿ ಜಾರಿ ಬಿದ್ದರೂ ಮೀಸೆಗೆ ಮಣ್ಣಾಗಲಿಲ್ಲ' ಎಂಬಂತೆ ಪೊಳ್ಳು ವಾದದಲ್ಲಿ ತೊಡಗಿರುವ ಮುನಿಯಾಲು ಉದಯ ಕುಮಾರ್ ಶೆಟ್ಟಿ ಸಹಿತ ಕಾಂಗ್ರೆಸ್ ಮುಖಂಡರ ಕ್ಷುಲ್ಲಕ ಮನಸ್ಥಿತಿಯ ಬಗ್ಗೆ ಅನುಕಂಪ ಮೂಡುತ್ತಿದೆ. ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿರುವ ಕಾಂಗ್ರೆಸ್ ಗೆ ಭ್ರಷ್ಟಚಾರದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಅವರು ರಾಜ್ಯ ಮಹಿಳಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಗೀತಾ ವಾಗ್ಲೆ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಅವರು ಕ್ಷೇತ್ರದಾದ್ಯoತ ಕೈಗೊಂಡಿರುವ ಅಭಿವೃದ್ಧಿ ಚಟುವಟಿಕೆಗಳನ್ನು ಸಹಿಸದ ಅಭಿವೃದ್ಧಿ ವಿರೋಧಿ ಕಾಂಗ್ರೆಸ್ ಪಾಳಯ ಒಂದಲ್ಲ ಒಂದು ನೆಪವನ್ನು ಮುಂದಿಡುತ್ತಾ ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಯೋಜನೆಗೆ ಅಡ್ಡಗಾಲು ಹಾಕುತ್ತಾ ಬಂದಿರುವುದು ಜಗಜ್ಜಾಹೀರಾಗಿದೆ. ಪರಶುರಾಮ ಮೂರ್ತಿ ಹಿತ್ತಾಳೆಯದ್ದಾಗಿದೆ ಎಂದು ಪೋಲಿಸ್ ತನಿಖೆಯಲ್ಲಿ ಸಾಬೀತಾಗಿರುವುದರಿಂದ ಕಾರ್ಕಳದಲ್ಲಿ ನಿರ್ಮಿಸಿರುವ ಪರಶುರಾಮ ಮೂರ್ತಿ ಪೈಬರ್ ನದ್ದು ಎಂಬ ಕಾಂಗ್ರೆಸಿಗರ ವಾದ ಶುದ್ಧ ಸುಳ್ಳಾಗಿದೆ.

ಸುಳ್ಳನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಕಾಂಗ್ರೆಸ್ಸಿನ ನೈಜ ಬಣ್ಣ ರಾಜ್ಯದ ದೈನಂದಿನ ವಿದ್ಯಮಾನಗಳಿಂದ ಬಟ್ಟಾಬಯಲಾಗಿದೆ. ಭ್ರಷ್ಟಾಚಾರ ಹಾಗೂ ಗ್ಯಾರಂಟಿಗಳ ಅಸಮರ್ಪಕ ನಿರ್ವಹಣೆಯ ಜೊತೆಗೆ ವಿಪರೀತ ಬೆಲೆ ಏರಿಕೆಯಿಂದ ಜನತೆಯ ನೆಮ್ಮದಿ ಹಾಳು ಮಾಡಿರುವ ಅಭಿವೃದ್ಧಿ ವಿರೋಧಿ ಕಾಂಗ್ರೆಸ್ಸಿನ ಸುಳ್ಳುಗಳನ್ನು ನಂಬುವಷ್ಟು ಜನತೆ ದಡ್ಡರಲ್ಲ. ಕೇವಲ ವಿರೋಧಕ್ಕಾಗಿ ವಿರೋಧಿಸುವವರು ಇನ್ನಾದರೂ ವೃಥಾ ಆರೋಪ ಮಾಡುವುದನ್ನು ಬಿಟ್ಟು ನೈಜ ರಾಜಕಾರಣದತ್ತ ಗಮನ ಹರಿಸುವುದು ಉತ್ತಮ ಎಂದು ಸಂಧ್ಯಾ ರಮೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article