
ಉಡುಪಿ: ಜುಲೈ 23ರಿಂದ 29ರವರೆಗೆ ಭಾರೀ ಮಳೆ- ಮುಂದಿನ 3 ದಿನ ರೆಡ್ ಅಲರ್ಟ್ ಘೋಷಣೆ
23/07/2025 03:06 PM
ಉಡುಪಿ: ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ಇವರ ಹವಾಮಾನ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ ಒಂದು ವಾರ (ಜು.23ರಿಂದ 29ರವರೆಗೆ) ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮೊದಲ ಮೂರು ದಿನ ರೆಡ್ ಅಲರ್ಟ್‌ನ್ನು ಘೋಷಿಸಲಾಗಿದೆ.
ಈ ದಿನಗಳಲ್ಲಿ ಜಿಲ್ಲೆಯಲ್ಲಿ ಬಿರುಗಾಳಿಯಿಂದ ಕೂಡಿದ ಮಳೆಯಾಗುವ ಸಾದ್ಯತೆ ಇದ್ದು ಪಶ್ಚಿಮದ ಅರಬೀ ಸಮುದ್ರದ ಕಡೆಯಿಂದ ವೇಗದ ಗಾಳಿ ಹಾಗೂ ಭಾರೀ ಗಾತ್ರದ ಅಲೆಗಳು ದಡವನ್ನು ಅಪ್ಪಳಿಸುವ ಸಂಭವವಿದೆ ಎಂದು ಹವಾಮಾನ ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.
ಜಿಲ್ಲೆಯಲ್ಲಿ ಮುಂದಿನ ಮೂರು ದಿನ ರೆಡ್ ಅಲರ್ಟ್ ಹಾಗೂ ನಂತರದ ದಿನಗಳಲ್ಲಿ ಆರೆಂಜ್ ಅಲರ್ಟ್‌ನ್ನು ನೀಡಿರುವುದರಿಂದ ಜಿಲ್ಲೆಯ ಜನತೆಗೆ ಹಾಗೂ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮುಂಜಾಗ್ರತಾ ಕ್ರಮವಾಗಿ ಕೆಲವು ಸೂಚನೆಗಳನ್ನು ನೀಡಿದೆ.
ಅದರಂತೆ ಸಾರ್ವಜನಿಕರು, ಪ್ರವಾಸಿಗರು, ಮೀನುಗಾರರು ನದಿ, ಸಮುದ್ರ ತೀರ ಅಥವಾ ನೀರಿರುವ ಪ್ರದೇಶಗಳ ಬಳಿ ಹೋಗದಂತೆ, ನೀರಿಗೆ ಇಳಿಯದಂತೆ ಎಚ್ಚರಿಕೆ ನೀಡಿದೆ. ಗಾಳಿ ಬೀಸುವ ಹಾಗೂ ಮಿಂಚು-ಸಿಡಿಲು ಕಾಣಿಸಿಕೊಳ್ಳುವ ವೇಳೆ ಹೊರಗೆ ತಿರುಗದಂತೆ, ಮನೆಯಲ್ಲಿ ಅಥವಾ ಸುರಕ್ಷಿತ ಕಟ್ಟಡದಲ್ಲಿ ಆಶ್ರಯ ಪಡೆಯುವಂತೆ ತಿಳಿಸಿದೆ. ರೈತರು ಕೃಷಿ ಚಟುವಟಿಕೆ ಯಿಂದ ದೂರವಿರುವಂತೆಯೂ ಅದು ತಿಳಿಸಿದೆ.