ರಾಹುಲ್ ಗಾಂಧಿಗೆ ಫಟಿಂಗ ಎಂದು ಟೀಕಿಸಿದಾತ ಈ ಸಿಎಂ ಮಾಧ್ಯಮ ಕಾರ್ಯದರ್ಶಿ ! ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ



 

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮ ಕಾರ್ಯದರ್ಶಿಯ ಹಳೆಯ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ಈಗ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿವೆ. ಕಾಂಗ್ರೆಸ್ ಪಕ್ಷದ ಅಗ್ರ ನಾಯಕ ರಾಹುಲ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಈ ಹಿಂದೆ ಮಾಡಲಾಗಿದ್ದ ವಿವಾದಾತ್ಮಕ ಪೋಸ್ಟ್‌ಗಳ ಸ್ಟ್ರೀನ್‌ಶಾಟ್‌ಗಳನ್ನು ಹಂಚಿಕೊಳ್ಳುವ ಮೂಲಕ ಜನರು, ಕಾಂಗ್ರೆಸ್ ನಾಯಕರ ಮಾನಸಿಕತೆಯನ್ನು ಪ್ರಶ್ನಿಸಿದ್ದಾರೆ.



ಬುಧವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಅವರ ಮೂವರು ಮಾಧ್ಯಮ ಕಾರ್ಯದರ್ಶಿಗಳನ್ನು ಆಯ್ಕೆ ಮಾಡಲಾಗಿತ್ತು. ಅದರಲ್ಲಿ ಒಬ್ಬರಾಗಿರುವ ರಾಘವೇಂದ್ರ ಭಟ್ ಎಂಬುವವರು ಈ ಹಿಂದೆ ಮಾಡಿದ್ದ ಪೋಸ್ಟ್‌ಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಮೇ 3, 2021ರ ಫೇಸ್‌ಬುಕ್ ಪೋಸ್ಟ್ ಒಂದರಲ್ಲಿ ರಾಹುಲ್ ಗಾಂಧಿ ಅವರನ್ನು 'ಘಟಿಂಗ' ಎಂದು ಕರೆಯಲಾಗಿತ್ತು. "ಈ ಘಟಿಂಗ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಮೊಮ್ಮಗ ಎಂದು ಕರೆಸಿಕೊಳ್ಳುವುದಕ್ಕೆ ಅರ್ಹನೇ?” ಎಂದು ಪ್ರಶ್ನಿಸಿ ಬರೆಯಲಾಗಿದ್ದ ಪೋಸ್ಟ್‌ನ ಸ್ಟ್ರೀನ್‌ಶಾಟ್ ಇಟ್ಟುಕೊಂಡು ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲಾಗಿದೆ.

ಇದರ ಜೊತೆಗೆ ಇತ್ತೀಚಿನ ಮತ್ತೊಂದು ಪೋಸ್ಟ್‌ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಸಂಬಂಧಿಸಿದಂತೆ ವ್ಯಂಗ್ಯವಾಡಲಾಗಿತ್ತು. "ಮೇ 26 ಮೋದಿ ಸರ್ಕಾರ ಹನ್ನೆರಡು ವರ್ಷ ಪೂರ್ಣಗೊಳಿಸಿದ ದಿನ, ಮೇ 26 ಸಿದ್ದರಾಮಯ್ಯ ರಾಜೀನಾಮೆಗೆ ನಿರ್ಧರಿಸಿದ ದಿನ... ಕಾಕತಾಳೀಯ ವೈರುಧ್ಯ ಹೊಂದಾಣಿಕೆ!” ಎಂದು ಬರೆಯಲಾಗಿತ್ತು.

ಈ ಸ್ಕ್ರೀನ್‌ಶಾಟ್‌ಗಳನ್ನು ಒಳಗೊಂಡ ಪೋಸ್ಟರ್ ಹಂಚಿಕೊಂಡಿರುವ ಜಾಲತಾಣ ಬಳಕೆದಾರರು, “ರಾಹುಲ್ ಗಾಂಧಿಯವರನ್ನು 'ಘಟಿಂಗ' ಎಂದು ಕರೆದವನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಅವರ ಮಾಧ್ಯಮ ಕಾರ್ಯದರ್ಶಿ! ಇದು ಅವರ ವೈಯಕ್ತಿಕ ಅಭಿಪ್ರಾಯವೇ? ಅಥವಾ ಕಾಂಗ್ರೆಸ್ ನಾಯಕರ ಅಧಿಕೃತ ಮನಸ್ಥಿತಿಯೇ? ಜನತೆ ಎಲ್ಲವನ್ನೂ ನೋಡುತ್ತಿದ್ದಾರೆ!” ಎಂದು ವಾಗ್ದಾಳಿ ನಡೆಸಿದ್ದಾರೆ.