ಅಮೆರಿಕಾ - ಇರಾನ್ ಶಾಂತಿ ಒಪ್ಪಂದ ಅಂತ್ಯ ? ಮತ್ತೆ ಯುದ್ಧ ಕಾರ್ಮೋಡ

 


ಅಮೆರಿಕಾ ಮತ್ತು ಇರಾನ್ ನಡುವಿನ (America Iran War) ಸಂಘರ್ಷ ಮತ್ತೊಮ್ಮೆ ಅಪಾಯಕಾರಿ ಹಂತಕ್ಕೆ ತಲುಪಿದೆ. ಈಗ ಇರುವ ಅಮೆರಿಕ ಮತ್ತು ಇರಾನ್​ ಮಧ್ಯದ ಕದನ ವಿರಾಮ (Ceasefire) ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜೊತೆಗಿನ ಕದನ ವಿರಾಮ ಒಪ್ಪಂದ ಮುಗಿದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ನ್ಯಾಟೋ ಶೃಂಗಸಭೆಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಇರಾನ್ ಒಪ್ಪಂದದ ನಿಯಮಗಳನ್ನು ಗೌರವಿಸಿಲ್ಲ ಎಂದು ಆರೋಪಿಸಿದ್ದಾರೆ.ಇರಾನ್ ಜೊತೆಗಿನ ಒಪ್ಪಂದ ಈಗ ಮುಗಿದಿದೆ ಎಂದು ನಾನು ಭಾವಿಸುತ್ತೇನೆ. ಅವರೊಂದಿಗೆ ಮಾತುಕತೆ ನಡೆಸುವುದು ಕೇವಲ ಸಮಯ ವ್ಯರ್ಥ’ ಎಂದು ಟ್ರಂಪ್ ಹೇಳಿದ್ದಾರೆ. ಈ ಹೇಳಿಕೆಯಿಂದ ಸದ್ಯ ಮತ್ತೆ ವಿಶ್ವದಲ್ಲಿ ಆತಂಕ ಹೆಚ್ಚಾಗಿದೆ.ಟ್ರಂಪ್​ ಈ ಹೇಳಿಕೆ ಗಲ್ಫ್ ಪ್ರದೇಶದಲ್ಲಿ ಈಗಾಗಲೇ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇರಾನ್ ತನ್ನ ಹಾರ್ಮುಜ್​​ ಪ್ರಾಂತ್ಯ ಮತ್ತು ಮಹ್ಶಹರ್ ಬಂದರಿನ ಮೇಲೆ ಅಮೆರಿಕ ನಡೆಸಿದ ದಾಳಿಗೆ ಪ್ರತೀಕಾರವಾಗಿ 85 ಅಮೆರಿಕದ ಸೈನಿಕ ನೆಲೆಗಳನ್ನು ಗುರಿಯಾಗಿಸಿಕೊಂಡಿರುವುದಾಗಿ ಹೇಳಿಕೊಂಡಿದೆ. ಇರಾನಿನ ಈ ಬೆದರಿಕೆಯ ನಂತರ ಬಹ್ರೇನ್ ಮತ್ತು ಕುವೈತ್‌ನಲ್ಲಿ ವಾಯುದಾಳಿ ಎಚ್ಚರಿಕೆ ಸೈರನ್‌ಗಳು ಮೊಳಗಿವೆ. ಎರಡೂ ದೇಶಗಳಲ್ಲಿ ಭದ್ರತಾ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಲಾಗಿದೆ. ಗಲ್ಫ್ ಪ್ರದೇಶವನ್ನು ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ.