ಉಡುಪಿ: ಕರ್ತವ್ಯ ಲೋಪ - ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ ನೇಮಕಾತಿ ರದ್ದು

ಉಡುಪಿ: ಕರ್ತವ್ಯ ಲೋಪ - ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ ನೇಮಕಾತಿ ರದ್ದು

 

ಉಡುಪಿ: ಜಿಲ್ಲಾ ಪೋಕ್ಸೊ ನ್ಯಾಯಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯದಲ್ಲಿದ್ದ  ವಿಶೇಷ ಸರಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ ಅವರನ್ನು ಕರ್ತವ್ಯ ಲೋಪದ ಆರೋಪದಲ್ಲಿ ವಿಶೇಷ ಸರಕಾರಿ ಅಭಿಯೋಜಕ ಹುದ್ದೆಯ ಅವರ ನೇಮಕಾತಿಯನ್ನು ರದ್ದುಗೊಳಿಸಿ ಸೆ.29 ರಂದು ಸರಕಾರ ಆದೇಶ ಹೊರಡಿಸಿದೆ. 

ವಿಶೇಷ ಸರ್ಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ಇವರು ನ್ಯಾಯಾಲಯಕ್ಕೆ ಮಾಹಿತಿ ನೀಡದೇ ಮತ್ತು ಪರ್ಯಾಯ ವ್ಯವಸ್ಥೆ ಮಾಡದೆ ನ್ಯಾಯಾಲಯದ ಕಲಾಪದಂದು ಕರ್ತವ್ಯಕ್ಕೆ ಅನಧಿಕೃತ ಗೈರು ಹಾಜರಾಗಿರುತ್ತಾರೆ. ಜೊತೆಗೆ ಉಡುಪಿಯ ಮಹಿಳಾ ಠಾಣೆಯಲ್ಲಿ ಇವರ ವಿರುದ್ದ ಜಾತಿ ನಿಂದನೆ ಪ್ರಕರಣವು ದಾಖಲಾಗಿತ್ತು.  

ವೈ.ಟಿ ರಾಘವೇಂದ್ರ ಅವರು ವಿಶೇಷ ಸರಕಾರಿ ಅಭಿಯೋಜಕರಾಗಿದ್ದು, ಇತರ ಯಾವುದೇ ನ್ಯಾಯಾಲಯ ಅಥವಾ ಬೇರೆ ಯಾವುದೇ ಪ್ರಕರಣಗಳಲ್ಲಿ ಕಕ್ಷಿಗಾರರ ಪರವಾಗಿ  ಪ್ರತಿನಿಧಿಸುವಂತಿಲ್ಲ ಎಂದು ನಿರ್ಬಂಧ ಇದ್ದರೂ ಅವರು ಇತರ ನ್ಯಾಯಾಲಯಗಳಲ್ಲಿ ಹಾಗೂ ಇತರ ಪ್ರಕರಣಗಳಲ್ಲಿ ಕಕ್ಷಿಗಾರರನ್ನು ಪ್ರತಿನಿಧಿಸುತ್ತಿದ್ದಾರೆಂದು ಮಧು ಎಂಬವರು ದಾಖಲೆ ಸಹಿತ ಸರಕಾರಕ್ಕೆ ದೂರು ಸಲ್ಲಿಸಿದ್ದರು. 

ಈ ಎಲ್ಲಾ ಆರೋಪಗಳಿಗೆ ವೈ.ಟಿ. ರಾಘವೇಂದ್ರ ಅವರು ನೀಡಿದ ಉತ್ತರಗಳು ಸಮಂಜಸವಲ್ಲ ಎಂದು ತೀರ್ಮಾನಿಸಿ, ಕರ್ತವ್ಯ ಲೋಪದಡಿ ಅವರ ಉಡುಪಿಯ ಪೋಕ್ಸೋ ನ್ಯಾಯಾಲಯದ ವಿಶೇಷ ಸರ್ಕಾರಿ ಹುದ್ದೆಯ ನೇಮಕಾತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿ ಗೃಹ ಇಲಾಖೆಯ ಅಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿರುತ್ತಾರೆ. 

ಸರಕಾರದ ಆದೇಶದಂತೆ ವೈ. ಟಿ. ರಾಘವೇಂದ್ರ ಅವರು ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರಕಾರಿ ಅಭಿಯೋಜಕರಾದ ಜಯರಾಮ ಶೆಟ್ಟಿ ಇವರಿಗೆ ಪೋಕ್ಸೋ ನ್ಯಾಯಾಲಯದ ತನ್ನ ಪ್ರಭಾರವನ್ನು ಹಸ್ತಾಂತರಿಸಿ  ಕರ್ತವ್ಯದಿಂದ ಬಿಡುಗಡೆಗೊಂಡರು.

Ads on article

Advertise in articles 1

advertising articles 2

Advertise under the article