
ಕಾರ್ಕಳ: ಪಿಯುಸಿ ವಿದ್ಯಾರ್ಥಿಯಾಗಿದ್ದಾಗ ನಾಪತ್ತೆಯಾಗಿದ್ದಾತ 13 ವರ್ಷಗಳ ಬಳಿಕ ಪತ್ತೆ !
ಕಾರ್ಕಳ: ಇಲ್ಲಿನ ಪ್ರಭಾಕರ ಪ್ರಭು ಎಂಬವರ ಮಗ ಅನಂತ ಕೃಷ್ಣ ಪ್ರಭು(16) ಪಿಯುಸಿ ಓದುತ್ತಿದ್ದಾಗ ನಾಪತ್ತೆಯಾಗಿದ್ದು ,ಇದೀಗ 13 ವರ್ಷಗಳ ಬಳಿಕ ಪತ್ತೆಯಾದ ಅಪರೂಪದ ಘಟನೆ ನಡೆದಿದೆ. ಇವರು ,ಮುಂಡ್ಕೂರು ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾಬ್ಯಾಸ ಮಾಡುತ್ತಿದ್ದರು. 13 ವರ್ಷಗಳ ಹಿಂದೆ ಮನೆಯಿಂದ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿದ್ದರು. ಈ ಬಗ್ಗೆ ಅವರ ತಂದೆ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯ ಅಪರಾಧ ಕ್ರಮಾಂಕ 117/2012 ರಂತೆ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ತನಿಖೆ ಬಗ್ಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ಈ ತಂಡವು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಬೆಂಗಳೂರಿನಲ್ಲಿ ವಾಸವಿರುವ ಬಗ್ಗೆ ಖಚಿತಪಡಿಸಿಕೊಂಡು ಅನಂತಕೃಷ್ಣ ಪ್ರಭು(29) ವನ್ನು ಬೆಂಗಳೂರಿನಲ್ಲಿ ಪತ್ತೆ ಹಚ್ಚಿದೆ. ಸುಮಾರು 13 ವರ್ಷಗಳಿಂದ ಪತ್ತೆಯಾಗದೇ ಇರುವ ಹಳೆ ಪ್ರಕರಣವನ್ನು ಪೊಲೀಸ್ ಉಪಾಧೀಕ್ಷಕ ಪ್ರಭು ಡಿ ಟಿ ಅವರ ತಂಡ ಕಾರ್ಯಾಚರಣೆ ನಡೆಸಿ ಬೆಂಗಳೂರಿನಿಂದ ಕರೆತಂದು ಮನೆಯವರಿಗೆ ಒಪ್ಪಿಸಿದೆ.