
ಸಂಡೂರು: ಪತಿ ಹೃದಯಾಘಾತದಿಂದ ಮೃತಪಟ್ಟ ಮರುದಿನವೇ ಪತ್ನಿ ಕೂಡ ಹೃದಯಾಘಾತದಿಂದ ಸಾವು!
ಸಂಡೂರು: ತಾಲೂಕಿನ ವಡೆರಾಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕ ಸಣ್ಣಹನುಮಂತಪ್ಪ (55) ಅವರು ಬುಧವಾರ ಹೃದಯಘಾತದಿಂದ ನಿಧನರಾಗಿದ್ದರೆ,ಅವರ ಪತ್ನಿ ಸುಜಾತಾ (50) ಕೂಡಾ ಮರುದಿನ ಗುರುವಾರ ಹೃದಯಘಾತದಿಂದ ಮೃತಪಟ್ಟ ಘಟನೆ ಸಂಭವಿಸಿದ್ದು. ಪತಿ - ಪತ್ನಿ ಇಬ್ಬರು ಸಾವಿನಲ್ಲೂ ಒಂದಾಗಿದ್ದಾರೆ.
ಹೊಸಪೇಟೆ ತಾಲೂಕಿನ ಸಣ್ಣಹನುಂತಪ್ಪ ಅವರು ಸಂಡೂರು ತಾಲೂಕಿನ ತೊಕೆನಹಳ್ಳಿ ತಾಂಡಾದ ಸರ್ಕಾರಿ ಶಾಲೆಯಲ್ಲಿ 20 ವರ್ಷಗಳಿಂದ ಸೇವೆ ಸಲ್ಲಿಸಿ ಪ್ರಸ್ತುತ ವಡೇರಹಳ್ಳಿ ಶಾಲೆಗೆ ವರ್ಗಾವಣೆಯಾಗಿ ಸೇವೆ ಸಲ್ಲಿಸುತ್ತಿದ್ದರು. ಕೂಡ್ಲಿಗಿ ತಾಲ್ಲೂಕಿನ ರಾಮದುರ್ಗ ಪತ್ನಿ ತವರಿನಲ್ಲೇ ಮನೆ ಮಾಡಿಕೊಂಡು ಜೊತೆ ವಾಸವಿದ್ದರು.
ಬುಧವಾರ ಬೆಳಿಗ್ಗೆ ವಾಯು ವಿಹಾರಕ್ಕೆ ತೆರಳಿದ್ದಾಗ ಹೃದಯಘಾತದಿಂದ ಮೃತಪಟ್ಟಿದ್ದರು. ಅವರ ಕಾರಿಗನೂರು ಗ್ರಾಮದಲ್ಲಿ ಪತಿಯ ಅಂತ್ಯಕ್ರಿಯೆ ಮುಗಿಸಿ ರಾಮದುರ್ಗಕ್ಕೆ ಸುಜಾತಾ ಮರಳಿದ್ದರು. ಗುರುವಾರ ಬೆಳಗಿನ ಜಾವ ಸುಜಾತಾ ಅವರೂ ಹೃದಯಘಾತದಿಂದ ನಿಧನರಾಗಿದ್ದಾರೆ.
ಮೃತ ದಂಪತಿಗೆ ಪುತ್ರ, ಪುತ್ರಿ ಇದ್ದಾರೆ.ಪತಿಯ ಅಂತ್ಯ ಸಂಸ್ಕಾರ ಮಾಡಿದ ಕಾರಿಗನೂರು ಗ್ರಾಮದಲ್ಲೇ ಪತ್ನಿಯ ಅಂತ್ಯಕ್ರಿಯೆ ನಡೆಸಲಾಗಿದ್ದು, ಸಾವಿನಲ್ಲೂ ಒಂದಾದ ದಂಪತಿಯನ್ನು ಬಂಧು ಮಿತ್ರರು ಸಂಬಂಧಿಗಳು ನೆನೆದು ಕಂಬನಿ ಮಿಡಿದಿದ್ದಾರೆ.