ಉಡುಪಿ: ಧರ್ಮದ ಕಾಲಂನಲ್ಲಿ 'ಬೌದ್ಧ ಧರ್ಮ' ಎಂದು ನಮೂದಿಸಿ- ಸಮತಾ ಸೈನಿಕ ದಳ ಮನವಿ

ಉಡುಪಿ: ಧರ್ಮದ ಕಾಲಂನಲ್ಲಿ 'ಬೌದ್ಧ ಧರ್ಮ' ಎಂದು ನಮೂದಿಸಿ- ಸಮತಾ ಸೈನಿಕ ದಳ ಮನವಿ



ಉಡುಪಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆ‌ರ್.ಅಂಬೇಡ್ಕರ್ ಅವರ ಅನುಯಾಯಿಗಳು ಧರ್ಮದ ಕಾಲಂನಲ್ಲಿ 'ಬೌದ್ಧ ಧರ್ಮ' ಎಂದು ನಮೂದಿಸುವಂತೆ ಸಮತಾ ಸೈನಿಕ ದಳ ಉಡುಪಿ ಜಿಲ್ಲಾ ಸಮಿತಿ ಮನವಿ ಮಾಡಿದೆ.

ಉಡುಪಿ ಪ್ರೆಸ್‌ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮತಾ ಸೈನಿಕ ದಳ (ಎಸ್‌ಎಸ್‌ಡಿ)ದ ಜಿಲ್ಲಾಧ್ಯಕ್ಷ ವಿಶ್ವನಾಥ ಪೇತ್ರಿ, 1956ರ ಅಕ್ಟೋಬರ್‌ನಲ್ಲಿ ಡಾ.ಅಂಬೇಡ್ಕ‌ರ್ ಅವರು ತನ್ನ ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮವನ್ನು ಸ್ವೀಕರಿಸಿ ಸಂದೇಶ ನೀಡಿದ್ದರು. ಕತ್ತಲಿನಿಂದ ಬೆಳಕಿನೆಡೆಗೆ ಸಾಗಲು ಅವರು ತೋರಿದ ಸನ್ಮಾರ್ಗದಲ್ಲಿ ನಾವಿಂದು ಸಾಗಬೇಕಿದೆ ಎಂದರು.ದಲಿತರು ಸಾಮಾಜಿಕ ಸಮಾನತೆಗಾಗಿ ಅತ್ಯಂತ ವೈಜ್ಞಾನಿಕವಾದ ಬೌದ್ಧ ಧರ್ಮವನ್ನು ಸಮೀಕ್ಷೆಯ ವೇಳೆಗೆ ನಮೂದಿಸಬೇಕು. ಶೋಷಿತ ಸಮುದಾಯಗಳೆಲ್ಲವೂ ಧರ್ಮದ ಅಸ್ಮಿತೆಯನ್ನು ಪಡೆಯಲು ಧರ್ಮ ಕಾಲಂನಲ್ಲಿ ಬೌದ್ಧ ಧರ್ಮ ಎಂದು ಬರೆಸಬೇಕು ಎಂದು ವಿಶ್ವನಾಥ ಪೇತ್ರಿ ಹೇಳಿದರು.

ಜಾತಿ ಕಾಲಂನಲ್ಲಿ ಸಹ ಬೌದ್ಧ ಎಂದು ಅಥವಾ ತಮ್ಮ ತಮ್ಮ ಜಾತಿಯನ್ನು ಇಚ್ಛಾನುಸಾರ ನಮೂದಿಸುವ ಮೂಲಕ ವರ್ಣಾಶ್ರಮ ಪದ್ಧತಿಯಾದ ಗೊಡ್ಡು ಚಾತುರ್ವರ್ಣ ಪದ್ಧತಿಗೆ ತಿಲಾಂಜಲಿ ನೀಡಬೇಕು ಎಂದು ಅವರು ಹೇಳಿದರು.

ಧರ್ಮದ ಕಾಲಂನಲ್ಲಿ ಬೌದ್ಧ ಎಂದು ನಮೂದಿಸುವುದರಿಂದ ಅಲ್ಪಸಂಖ್ಯಾತರ ವರ್ಗಕ್ಕೆ ಸೇರುವ ಸಾಧ್ಯತೆ ಇದ್ದು, ಇದರಿಂದ ಪರಿಶಿಷ್ಟ ಜಾತಿಗೆ ಇರುವ ವಿಶೇಷ ಸೌಲಭ್ಯಗಳಿಂದ ವಂಚಿತರಾಗುವುದಿಲ್ಲವೇ ಎಂದು ಪ್ರಶ್ನಿಸಿದಾಗ, ವರ್ಣಾಶ್ರಮ ಪದ್ಧತಿಯಿಂದ ನಾವು ಈಗಲೂ ನೋವು ಅನುಭವಿಸುತ್ತಿದ್ದು, ಇದರಿಂದ ಬಿಡುಗಡೆ ಬೌದ್ಧ ಧರ್ಮದಿಂದ ಮಾತ್ರ ಸಾಧ್ಯ ಎಂದರು.ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಬೌದ್ಧ ಮಹಾಸಭಾದ ಅಧ್ಯಕ್ಷ ಹಾಗೂ ಉಪಾಸಕರಾದ ಶಂಭು ಸುವರ್ಣ, ಎಸ್‌ಎಸ್‌ಡಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿಶ್ಲೇಶ್ ಬ್ರಹ್ಮಾವರ ಹಾಗೂ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಶಿರಿಯಾರ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article