
ನವದೆಹಲಿ: ಸ್ವಾಮಿ ಚೈತನ್ಯಾನಂದ ಸರಸ್ವತಿಯಿಂದ 32 ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ- ಆರೋಪ ಬೆನ್ನಲ್ಲೇ ಸ್ವಾಮೀಜಿ ಪರಾರಿ
ನವದೆಹಲಿ: ವಸಂತ್ ಕುಂಜ್ ಪ್ರದೇಶದ ಪ್ರಮುಖ ಆಶ್ರಮವೊಂದರ ಮುಖ್ಯಸ್ಥನ ಮೇಲೆ 15 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದಾರೆ.ಸದ್ಯ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಇದೇ ವೇಳೆ ಮಠದ ಆಡಳಿತವು ಸ್ವಾಮಿ ಚೈತನ್ಯಾನಂದ ಸರಸ್ವತಿಯನ್ನು ನಿರ್ದೇಶಕ ಸ್ಥಾನದಿಂದ ತೆಗೆದುಹಾಕಿದೆ.
ಸ್ವಾಮಿ ಪಾರ್ಥಸಾರಥಿ ಎಂದು ಹಿಂದೆ ಕರೆಯಲ್ಪಡುತ್ತಿದ್ದ ಚೈತನ್ಯಾನಂದ ಸರಸ್ವತಿ ಮೇಲೆ ಕ್ರಿಮಿನಲ್ ಆರೋಪ ಹೊರಿಸಲಾಗುತ್ತಿರುವುದು ಇದೇ ಮೊದಲಲ್ಲ. 2009 ರಲ್ಲಿ, ಡಿಫೆನ್ಸ್ ಕಾಲೋನಿಯಲ್ಲಿ ವಂಚನೆ ಮತ್ತು ಕಿರುಕುಳ ಪ್ರಕರಣ ದಾಖಲಾಗಿತ್ತು, ಮತ್ತು 2016 ರಲ್ಲಿ, ವಸಂತ್ ಕುಂಜ್‌ನಲ್ಲಿ ಮಹಿಳೆಯೊಬ್ಬರು ಕಿರುಕುಳ ದೂರು ದಾಖಲಿಸಿದ್ದರು.
ಆರೋಪಿ ಸ್ವಾಮೀಜಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಶಿಕ್ಷಣ ಸಂಸ್ಥೆಯಲ್ಲಿ ಮ್ಯಾನೇಜ್‌ಮೆಂಟ್‌ನಲ್ಲಿ ಕೋರ್ಸ್‌ಗಳನ್ನು ಕಲಿಯುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪ ಕೇಳಿ ಬಂದಿದೆ.ವಿಚಾರಣೆಯ ಸಮಯದಲ್ಲಿ, 32 ವಿದ್ಯಾರ್ಥಿನಿಯರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದ್ದು, ಅದರಲ್ಲಿ 17 ಮಂದಿ ಮೇಲೆ ಸ್ವಾಮೀಜಿ ನಿಂದನೀಯ ಭಾಷೆ, ಅಶ್ಲೀಲ ವಾಟ್ಸಾಪ್ ಮತ್ತು ಪಠ್ಯ ಸಂದೇಶಗಳು ಹಾಗೂ ಅನಗತ್ಯ ದೈಹಿಕ ಸಂಪರ್ಕವನ್ನು ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಕೃತ್ಯ ಸಂಬಂಧದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು , ಪೊಲೀಸರು ಹಾರ್ಡ್ ಡಿಸ್ಕ್ ಗಳು ಮತ್ತು ವಿಡಿಯೋ ರೆಕಾರ್ಡರ್ ಅನ್ನು ಹೊಂದಿದ್ದು, ಅವುಗಳನ್ನು ವಿಧಿವಿಜ್ಞಾನ ವಿಶ್ಲೇಷಣೆಗೆ ಕಳುಹಿಸಲಾಗಿದೆ.