
ಶಿವಮೊಗ್ಗ: ಷೇರ್ ಮಾರ್ಕೆಟ್‌ನಲ್ಲಿ ಹೆಚ್ಚಿನ ಲಾಭದ ಆಮಿಷ- 1.81 ಕೋಟಿ ಕಳೆದುಕೊಂಡ ವೈದ್ಯೆ !
ಶಿವಮೊಗ್ಗ: ನಗರದ ವೈದ್ಯೆಯೊಬ್ಬರು ಷೇರ್ ಮಾರ್ಕೆಟ್‌ನಲ್ಲಿ ಹೆಚ್ಚಿನ ಲಾಭ ಗಳಿಸುವ ಆಸೆಯಿಂದ ಬರೋಬ್ಬರಿ 1.81 ಕೋಟಿ ರೂ. ಕಳೆದುಕೊಂಡಿದ್ದಾರೆ.
ಕಳೆದ ಏ.26ರಂದು ವೈದ್ಯೆಯ ಮೊಬೈಲ್‌ಗೆ ಅಪರಿಚಿತ ನಂಬರ್‌ನಿಂದ ಕರೆ ಬಂದಿತ್ತು. ಕರೆ ಸ್ವೀಕರಿಸಿದ್ದ ವೈದ್ಯೆಗೆ ಅಪರಿಚಿತ ಬುಲ್ ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಪಡೆಯುವ ಆಸೆ ತೋರಿಸಲಾಗಿತ್ತು.
ಕಂಪನಿ ಹೆಸರಿನ ವೆಬ್‌ಸೈಟ್‌ಗೆ ಲಾಗಿನ್ ಆಗಿದ್ದ ವೈದ್ಯೆಯ ಟೆಲಿಗ್ರಾಂ ಆ್ಯಪ್‌ಗೆ ಅಪರಿಚಿತ ಮೆಸೇಜ್ ಕೂಡ ಮಾಡಿದ್ದ. ಆತ ಹೇಳಿದಂತೆ ವೈದ್ಯೆ ಬುಲ್ ಮಾರ್ಕೆಟ್‌ನಲ್ಲಿ ಆರಂಭದಲ್ಲಿ 1,090 ಹಾಗೂ 430 ರೂ.ಗಳನ್ನು ಹೂಡಿಕೆ ಮಾಡಿದ್ದರು. ಒಂದು ತಿಂಗಳ ಬಳಿಕ ವೈದ್ಯೆ ಬುಲ್‌ಮಾರ್ಕೆಟ್ ಖಾತೆಯಲ್ಲಿ ಹೆಚ್ಚಿನ ಲಾಭಾಂಶವನ್ನು ತೋರಿಸಲಾಗಿತ್ತು.ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಮತ್ತಷ್ಟು ಲಾಭಾಂಶ ಸಿಗುವುದಾಗಿ ನಾಲೈದು ಬೇರೆ ಬೇರೆ ನಂಬರ್‌ಗಳಿಂದ ಕರೆ ಮಾಡಿ ಹೇಳಿದ್ದ. ಅವರ ಮಾತು ನಂಬಿದ ವೈದ್ಯೆ ಹಂತ ಹಂತವಾಗಿ ವಿವಿಧ ಖಾತೆಗಳಿಂದ 1,81,33,770 ರೂ. ಹೂಡಿಕೆ ಮಾಡಿದ್ದರು. ಬಳಿಕ ಲಾಭಾಂಶದ ಹಣ ವಿತ್ ಡ್ರಾ ಮಾಡಿಕೊಳ್ಳಲು ಮುಂದಾದಾಗ ಮತ್ತೆ 50 ಸಾವಿರ ರೂ. ಪಾವತಿಸುವಂತೆ ವಂಚಕರು ಸೂಚಿಸಿದ್ದರು. ಇದರಿಂದ ವಂಚನೆಗೆ ಒಳಗಾಗಿರುವುದು ವೈದ್ಯೆ ಗಮನಕ್ಕೆ ಬಂದಿದ್ದು, ಶಿವಮೊಗ್ಗ ಸೆನ್ ಠಾಣೆಗೆ ದೂರು ನೀಡಿದ್ದಾರೆ.