ದುಬೈ: ಏಷ್ಯಾ ಕಪ್ ಕ್ರಿಕೆಟ್- ರೋಚಕ ಹಣಾಹಣಿಯಲ್ಲಿ ಗೆದ್ದ ಭಾರತ : ಪಾಕ್ತಿಸ್ಥಾನಕ್ಕೆ ಮತ್ತೆ ಸೋಲು

ದುಬೈ: ಏಷ್ಯಾ ಕಪ್ ಕ್ರಿಕೆಟ್- ರೋಚಕ ಹಣಾಹಣಿಯಲ್ಲಿ ಗೆದ್ದ ಭಾರತ : ಪಾಕ್ತಿಸ್ಥಾನಕ್ಕೆ ಮತ್ತೆ ಸೋಲು

 


ದುಬೈ: ದುಬೈನಲ್ಲಿ ರವಿವಾರ ರಾತ್ರಿ ರೋಮಾಂಚನಕಾರಿ ಏಷ್ಯಾ ಕಪ್ ಫೈನಲ್ ನಲ್ಲಿ ಭಾರತ ಮತ್ತು ಪಾಕಿಸ್ಥಾನ ತಂಡದ ನಡುವೆ ಜಿದ್ದಾಜಿದ್ದಿನ ಹಣಾಹಣಿ ನಡೆಯಿತು. ಕೊನೆಯ ಕ್ಷಣದವರೆಗೂ ನಡೆದ ಪಂದ್ಯದಲ್ಲಿ ಅಜೇಯ ಭಾರತ 5 ವಿಕೆಟ್ ಗಳ ಜಯ ಸಾಧಿಸಿ ಪಾಕಿಸ್ಥಾನಕ್ಕೆ ತಿಂಗಳ ಒಳಗೆ ಮೂರನೇ ಸೋಲಿನ ಪೆಟ್ಟು ನೀಡಿತು.

ಭಾರತಕ್ಕೆ ಗೆಲ್ಲಲು 6 ಎಸೆತಗಳಲ್ಲಿ 10 ರನ್‌ಗಳು ಬೇಕಾಗಿದ್ದವು. ಹರಿಸ್ ರೌಫ್ ಎಸೆದ ಮೊದಲ ಎಸೆತದಲ್ಲಿ ತಿಲಕ್ ವರ್ಮಾ ಎರಡು ರನ್ ತೆಗೆದರೆ ಮುಂದಿನ ಎಸೆತದಲ್ಲಿ ಸಿಕ್ಸರ್ ಚಚ್ಚಿದರು. ಮುಂದಿನ ಎಸೆತದಲ್ಲಿ 1 ರನ್ ತೆಗೆದರೆ ಕೊನೆಯಲ್ಲಿ ಬಂದ ರಿಂಕು ಸಿಂಗ್ ಬೌಂಡರಿ ಬಾರಿಸಿ ವಿಜಯೋತ್ಸವ ಆಚರಿಸಿದರು.

ಟಾಸ್ ಗೆದ್ದ ಭಾರತ ತಂಡದ ಕಪ್ತಾನ ಸೂರ್ಯ ಕುಮಾರ್ ಯಾದವ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆರಂಭದಲ್ಲಿ ಅಬ್ಬರಿಸಿದ ಪಾಕಿಸ್ಥಾನ ಭಾರೀ ಮೊತ್ತ ಕಲೆ ಹಾಕುವ ಸೂಚನೆ ನೀಡಿತು. ಸಾಹಿಬ್‌ಜಾದಾ ಫರ್ಹಾನ್ ಮತ್ತು ಫಖರ್‌ ಜಮಾನ್ ಅಮೋಘ ಜತೆಯಾಟವಾಡಿದರು. 10 ನೇ ಓವರ್ ನಲ್ಲಿ ವರುಣ್ ಚಕ್ರವರ್ತಿ ಅವರು 57(38 ಎಸೆತ)ರನ್ ಗಳಿಸಿದ್ದ ಫರ್ಹಾನ್ ವಿಕೆಟ್ ಪಡೆದರು. ಆ ಬಳಿಕ ಸೈಮ್ ಅಯೂಬ್ ವಿಕೆಟ್ ಕಳೆದುಕೊಂಡಿತು, ಫಖರ್ ಜಮಾನ್ ಅಬ್ಬರಿಸಿ 46 ರನ್ ಕೊಡುಗೆ ನೀಡಿ ಔಟಾದರು. ಆ ಬಳಿಕ ಭಾರತದ ಬೌಲರ್ ಗಳು ಮೇಲುಗೈ ಸಾಧಿಸಿ 146 ಕ್ಕೆ ಆಲೌಟ್ ಮಾಡಿದರು. ಕುಲದೀಪ್ ಯಾದವ್ 4 ವಿಕೆಟ್ ಕಬಳಿಸಿದರು. ಅಕ್ಷರ್, ಬುಮ್ರಾ, ವರುಣ್ ತಲಾ 2 ವಿಕೆಟ್  ಕಬಳಿಸಿದರು. 

ಚೇಸಿಂಗ್ ವೇಳೆ ಭಾರತ ತಂಡ 20 ರನ್ ಆಗುವಷ್ಟರಲ್ಲಿ 3 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆ ಬಳಿಕ  ನೆಲಕಚ್ಚಿ ನಿಂತ ತಿಲಕ್ ವರ್ಮಾ ಕೊನೆಯವರೆಗೂ ನಿಂತರು. 53 ಎಸೆತಗಳಲ್ಲಿ 69 ರನ್ ಕೊಡುಗೆ ನೀಡಿ ಸಾರ್ಥಕ ಸಾಧನೆ ಮಾಡಿದರು. ಸಂಜು ಸ್ಯಾಮ್ಸನ್ 24 ಮತ್ತು ಶಿವಂ ದುಬೆ ಅವರ 33 ರನ್ ಗೆಲುವಿನಲ್ಲಿ ದೊಡ್ಡ ಕೊಡುಗೆ ಎನಿಸಿತು.

Ads on article

Advertise in articles 1

advertising articles 2

Advertise under the article